ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ನೀಡಿ: ಡಾ.ಶಾಂತರಾಜು

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.07
-ಚಾಮರಾಜನಗರ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬರುವ ಸಂಯೋಜಿತ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ದೈಹಿಕ ಶಿಕ್ಷಣ ನಿರ್ದೇಶಕರುಗಳು ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿ ನೀಡಿ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಮತ್ತು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಭಾಗವಹಿಸಲು ಅವಕಾಶ ನೀಡಿದರೆ ಮಾತ್ರ ಕ್ರೀಡಾ ವಿದ್ಯಾರ್ಥಿಯ ಕನಸು ನನಸಾಗುತ್ತದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಶಾಂತರಾಜು ತಿಳಿಸಿದರು.


2024-25ನೇ ಸಾಲಿನಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ವಿವಿಧ ಕ್ರೀಡಾಕೂಟ ಆಯೋಜನೆ ಮಾಡಲು ಸಹಕಾರ ನೀಡಿದ ವಿಶ್ವವಿದ್ಯಾಲಯದ ಕುಲಪತಿರವರಿಗೆ ಹಾಗೂ ಕ್ರೀಡಾಕೂಟಕ್ಕೆ ಸಹಕಾರ ನೀಡಿದ ಎಲ್ಲಾ ಕ್ರೀಡಾಧಿಕಾರಿಗಳಿಗೆ ಮತ್ತು ಆಯೋಜನೆ ಮಾಡಿದ ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು
ಚಾಮರಾಜನಗರ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ 2025-26ನೇ ಸಾಲಿನ ದೈಹಿಕ ಶಿಕ್ಷಣ ನಿರ್ದೇಶಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಗಡಿ ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಪಟುಗಳಿದ್ದಾರೆ ಅವರ ಪ್ರತಿಭೆ ಚೆಲ್ಲಲು ಸೂಕ್ತ ವೇದಿಕೆಯನ್ನು ಕಲ್ಪಿಸಲಾಗುತ್ತದೆ ಇದನ್ನು ಬಳಸಿಕೊಳ್ಳಿ


ಚಾಮರಾಜನಗರ ವಿಶ್ವವಿದ್ಯಾನಿಲಯದಿಂದ ಖೋಖೋ, ಕಬಡ್ಡಿ, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್ ಕ್ರಾಸ್ ಕಂಟ್ರಿ ಮತ್ತು ಫೆನ್ಸಿಂಗ್ ಕ್ರೀಡೆಯನ್ನು ಸೆಪ್ಟೆಂಬರ್ 18 ರಿಂದ ಸೆಪ್ಟೆಂಬರ್ 28 ರವರೆಗೆ ವಿವಿಧ ದಿನಾಂಕದಂದು ಆಯ್ಕೆ ಪ್ರಕ್ರಿಯೆ ಮಾಡಲಾಗುವುದು. ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮತ್ತು ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಕ್ರೀಡಾಕೂಟಕ್ಕೆ ತಂಡಗಳನ್ನು ವಿವಿಧ ಕಾಲೇಜಿನಿಂದ ಆಯ್ಕೆ ಮಾಡಿ ಕ್ರೀಡಾಪಟುಗಳಿಗೆ ತರಬೇತಿ ನೀಡಿ ವಿಶ್ವವಿದ್ಯಾನಿಲಯದ ವತಿಯಿಂದ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.


ಚಾಮರಾಜನಗರ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಚಾಮರಾಜನಗರ ಇವರ ಸಹಯೋಗದಲ್ಲಿ ಅಥ್ಲೆಟಿಕ್ಸ್ ಪುರುಷರು ಮತ್ತು ಮಹಿಳೆಯರಿಗಾಗಿ 26 ಮತ್ತು 27 ಸೆಪ್ಟೆಂಬರ್ 2025 ರಂದು ಚಾಮರಾಜನಗರದಲ್ಲಿ ಆಯೋಜನೆ ಮಾಡಲಾಗುವುದು.


2025-26ನೇ ಸಾಲಿನಲ್ಲಿ ಕ್ರಾಸ್ ಕಂಟ್ರಿ ಮಹಿಳಾ ಮತ್ತು ಪುರುಷರಿಗೆ ದೈಹಿಕ ಶಿಕ್ಷಣ ವಿಭಾಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಚಾಮರಾಜನಗರ ಇವರ ಸಹಯೋಗದಲ್ಲಿ 24 ಮತ್ತು 25 ಅಕ್ಟೋಬರ್ 2025 ರಂದು ಆಯೋಜನೆ ಮಾಡಲಾಗುವುದು.


ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಳ್ಳೇಗಾಲ ಮತ್ತು ಜೆಎಸ್‍ಎಸ್ ಕಾಲೇಜು, ಕೊಳ್ಳೇಗಾಲ ಇವರ ಸಹಯೋಗದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.


2025-26 ನೇ ಸಾಲಿನ ಪುರುಷರ ಕ್ರೀಡಾಕೂಟವನ್ನು ಚಾಮರಾಜನಗರ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಚಾಮರಾಜನಗರ ಇವರ ಸಹಯೋಗದಲ್ಲಿ 5 ಮತ್ತು 6 ಮಾರ್ಚ್ 2026 ರಂದು ಆಯೋಜನೆ ಮಾಡಲಾಗುವುದು ಎಂದು ನಿರ್ದೇಶಕರು ಡಾ. ಶಾಂತರಾಜು ತಿಳಿಸಿದರು.


ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲು ಬಿ.ಎಸ್. ಮಹಾದೇವಸ್ವಾಮಿ ಮಾತನಾಡಿ, ನಿರಂತರ ಪ್ರಯತ್ನ ಕ್ರೀಡೆ ಕೂಡ ಭಾಗವಹಿಸಿದರೆ ಯಶಸ್ಸು ಖಚಿತ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೆ ಮಾಡುವ ಅಭಿರುಚಿ ಬೆಳೆಸಿಕೊಳ್ಳಬೇಕು ಹಾಗೂ ನಮ್ಮ ಕಾಲೇಜಿನಿಂದ ಶಾಂತರಾಜು ನಿರ್ದೇಶಕರಾಗಿರುವುದು ಬಹಳ ಸಂತೋಷವಾಗುತ್ತದೆ ಅವರಿಗೆ ವಿಶ್ವವಿದ್ಯಾನಿಲಯದ ಕಾರ್ಯ ಚಟುವಟಿಕೆ ಮಾಡಲು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.


ಇದೇ ವೇಳೆ ಜಿಲ್ಲೆ ಯುವ ಪ್ರಶಸ್ತಿ ಪುರಸ್ಕøತ ಜಿ. ಬಂಗಾರುರವರನ್ನು ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲೆಯ ವಿವಿಧ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ, ಜಯಶಂಕರ್. ಪುಟ್ಟರಾಜು. ಮಲ್ಲು ಸ್ವಾಮಿ. ರಾಜಪ್ಪ, ಶ್ರೀಧರ್, ಉಮೇಶ್, ಮನೋಜ್ ಕುಮಾರ್, ಪವನ್, ವಾಸು, ಸೇರಿದಂತೆ ಇತರ ವಿಧವಿಧ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಶಿಕ್ಷಕರು ಸಭೆಯಲ್ಲಿ ಹಾಜರಿದ್ದರು.