ಗ್ಯಾಸ್ ಸಿಲಿಂಡರ್,ಶೂ ಕಳವು ಖದೀಮರಿಬ್ಬರ ಸೆರೆ

ವೈಟ್‌ಫೀಲ್ಡ್ ವಿಭಾಗ ಕೆ.ಆರ್ ಪುರ ಪೊಲೀಸ್ ಠಾಣೆ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡಿರುವ ಸುಮಾರು ೮೦ ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ನಗರ ಪೊಲೀಸ್ ಆಯುಕ್ತ
ಬಿ. ದಯಾನಂದ್‌ರವರು ವೀಕ್ಷಿಸುತ್ತಿರುವುದು. ಪೊಲೀಸ್ ಅಧಿಕಾರಿಗಳು ಇದ್ದಾರೆ.

ಬೆಂಗಳೂರು, ಜು.೧೯-ಗ್ಯಾಸ್ ಸಿಲಿಂಡರ್, ವಾಹನದ ಬ್ಯಾಟರಿ ಹಾಗೂ ಶೂಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ವಿದ್ಯಾರಣ್ಯಪುರ ಪೊಲೀಸರು ೧೦.೭೨ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಗಾಧರ ಅಲಿಯಾಸ್ ಗಂಗ ಹಾಗೂ ಯಲ್ಲಪ್ಪ ಬಂಧಿತ ಆರೋಪಿಗಳಾಗಿದ್ದಾರೆ,ಅವರಿಂದ ೧೦.೭೨ ಲಕ್ಷ ಮೌಲ್ಯದ ೭೧೫ ಜೊತೆ ಬೆಲೆಬಾಳುವ ಶೂಗಳು, ೨ ಗ್ಯಾಸ್ ಸಿಲಿಂಡರ್, ಒಂದು ಎಲೆಕ್ಟ್ರಿಕ್ ವಾಹನದ ಬ್ಯಾಟರಿ ಹಾಗೂ ಕೃತ್ಯಕೆ ಬಳಸಿದ್ದ ಒಂದು ಪ್ಯಾಸೆಂಜರ್ ಆಟೋವನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರಣ್ಯಪುರ ಪೊಲೀಸ್ ಠಾಣಾ ಸರಹದ್ದಿನ, ಬಿ.ಇ.ಎಲ್ ಲೇಔಟ್‌ನ ಮನೆಯ ಗೇಟ್ ಬಳಿ ಇರಿಸಿದ್ದ ೨ ಗ್ಯಾಸ್ ಸಿಲಿಂಡರ್ ಹಾಗೂ ೪ ಜೊತೆ ಬೆಲೆಬಾಳುವ ಶೂಗಳು ಕಳ್ಳತನವಾಗಿದ್ದ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಿ.ಇ.ಎಲ್ ಲೇಔಟ್‌ನ ೫ನೇ ಬ್ಲಾಕ್‌ನಲ್ಲಿ ಇಬ್ಬರನ್ನು ಆಟೋ ರಿಕ್ಷಾ ಸಮೇತ ಬಂಧಿಸಲಾಗಿದೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಜೀತ್ ವಿ.ಜೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತವರ ಸಿಬ್ಬಂದಿ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.