
ಬೆಂಗಳೂರು, ನ. ೨೩- ರಾಜ್ಯ ಕಾಂಗ್ರೆಸ್‌ನಲ್ಲಿ ನಮ್ಮ ಪ್ರಕಾರ ಯಾವುದೇ ಗೊಂದಲಗಳಿಲ್ಲ, ಅದೆಲ್ಲಾ ಮಾಧ್ಯಮಗಳ ಸೃಷ್ಟಿ ಗೊಂದಲಗಳಿಗೆ ಪರಿಹಾರ ನೀಡಬೇಕು ಎಂದು ಹೈಕಮಾಂಡ್‌ಗೆ ಅನಿಸಿದರೆ ಹೈಕಮಾಂಡ್ ಅದಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಎಐಸಿಸಿ ಅಧ್ಯಕ್ಷರಾಗಿ ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಅವರು ರಾಜ್ಯ ರಾಜಕೀಯವನ್ನು ಸಂಪೂರ್ಣವಾಗಿ ಬಲ್ಲವರು. ೫೦ ವರ್ಷಗಳ ಸುದೀರ್ಘ ರಾಜಕೀಯ ಅನುಭವ ಅವರಿಗಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಗೊಂದಲ ಇದೆ ಎಂದು ಅವರಿಗೆ ಅನಿಸಿದರೆ ರಾಹುಲ್‌ಗಾಂಧಿಯವರು ವಿದೇಶದಿಂದ ಬಂದ ನಂತರ ಅವರ ಜತೆ ಚರ್ಚಿಸಿ ಪರಿಹಾರ ಒದಗಿಸಿ ಕೊಡುತ್ತಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ರೇಸ್‌ನಲ್ಲಿ ನೀವಿದ್ದೀರಾ ಎಂಬ ಪ್ರಶ್ನೆಗೆ ಈಗ ಅಂಥ ಸಂದರ್ಭವೇ ಇಲ್ಲ. ಸಂದರ್ಭ ಬಂದಾಗ ಮಾತನಾಡುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಎಐಸಿಸಿ ಅಧ್ಯಕ್ಷರನ್ನು ಭೇಟಿ
ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಯಾವ ಸಮಸ್ಯೆ ಇಲ್ಲ. ಯಾರ ಮನೆಗೆ ಹೋದರೆ ಸುದ್ದಿ ಮಾಡುತ್ತೀರಿ, ಕೆಲಸ ಇರುತ್ತದೆ, ಹಾಗಾಗಿ ಹೋಗಿರುತ್ತಾರೆ. ಸತೀಶ್ ಜಾರಕಿಹೊಳಿ ಮನೆಯಲ್ಲಿ ನಾವು ಐವರು ಸಚಿವರು ಊಟ ಮಾಡಿದೆವು. ಅದು ತಪ್ಪಾ, ನಾವು ಭೇಟಿ ಮಾಡಿ ಚರ್ಚೆ ನಡೆಸಬಾರದೇ, ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಬಿಟ್ಟು ಯಾವ ತೀರ್ಮಾನಗಳೂ ಆಗುವುದಿಲ್ಲ ಎಂದರು.
ಹೈಕಮಾಂಡ್‌ನವರು ಇಲ್ಲಿಯವರೆಗೂ ನಾಯಕತ್ವ ಬದಲಾವಣೆ ಆಗುತ್ತದೆ, ಸಂಪುಟ ಪುನಾರಚನೆ ಆಗುತ್ತದೆ ಎಂದು ಹೇಳಿದ್ದಾರೆಯೇ. ಮುಖ್ಯಮಂತ್ರಿ ಆಯ್ಕೆ ಮಾಡುವ ಸಂದರ್ಭದಲ್ಲಿ ಎಐಸಿಸಿ ವೀಕ್ಷಕರು ಬಂದಿದ್ದರು. ಸಿಎಲ್‌ಪಿ ಸಭೆಯಲ್ಲೇ ವೀಕ್ಷಕರ ಮುಂದೆ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ವೀಕ್ಷಕರು ಸಿದ್ದರಾಮಯ್ಯ ಎರಡೂವರೆ ವರ್ಷ ಸಿಎಂ ಎಂದು ಹೇಳಿರಲಿಲ್ಲ. ಮಧ್ಯೆದಲ್ಲಿ ಬದಲಾಯಿಸುತಾರೆ ಎಂಬುದು ಹೈಕಮಾಂಡ್‌ಗೆ ಬಿಟ್ಟದ್ದು. ನಾವು ಬದಲಾವಣೆ ಮಾಡಲು ಆಗುತ್ತದೆಯೇ, ಆ ಸಂದರ್ಭ ಬಂದಾಗ ಹೈಕಮಾಂಡ್‌ನವರು ಮಾಡುತ್ತಾರೆ. ಹಿಂದೆ ಎಲ್ಲಾ ಮಾಡಿಲ್ಲವೇ, ಬಂಗಾರಪ್ಪರವರನ್ನು ಬದಲಿಸಿ ವೀರಪ್ಪ ಮೊಯ್ಲಿ ರವರನ್ನು ಸಿಎಂ ಮಾಡಿದ್ದರು. ಈಗ ಆ ಸಂದರ್ಭ ಬಂದಿದೆ ಎಂದು ನನಗೆ ಅನಿಸುತ್ತಿಲ್ಲ ಎಂದು ಅವರು ತಿಳಿಸಿದರು.
ದಲಿತ ಸಚಿವರುಗಳು ಡಿನ್ನರ್ ಮೀಟಿಂಗ್ ನಡೆಸುತ್ತಾರೆ. ಆದರೆ ದಲಿತ ಸಿಎಂ ಬಗ್ಗೆ ಏನು ಆಗುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ, ನಾವೆಲ್ಲಾ ಮೀಟಿಂಗ್ ಮಾಡಿದ ತಕ್ಷಣ ಆಗುತ್ತದೆಯೇ, ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡಬೇಕು. ರಾಹುಲ್‌ಗಾಂಧಿಯವರೊಂದಿಗೆ ಚರ್ಚಿಸಿ ಖರ್ಗೆಯವರು ಒಂದು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರಾದವರು ಚುನಾವಣೆಯಲ್ಲಿ ಎಲ್ಲರ ನೆರವಿನಿಂದ ಪಕ್ಷವನ್ನು ಅಧಿಕಾರಕ್ಕೆ ತಂದಿರುತ್ತಾರೆ. ನಾನೇ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ ಎಂದು ಹೇಳುವುದು ಸರಿ ಹೋಗಲ್ಲ. ಈ ಹಿಂದೆ ನಾನು ೨೦೧೩ ರಲ್ಲಿ ಪಕ್ಷದ ಅಧ್ಯಕ್ಷನಾಗಿ ಎಲ್ಲರ ಜತೆಗೂಡಿಯೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತೆ ನೋಡಿಕೊಂಡಿದ್ದೆ. ದುರಾದೃಷ್ಟವಶಾತ್ ನಾನು ಚುನಾವಣೆಯಲ್ಲಿ ಸೋತೆ. ಹಾಗೆಂದು ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹೇಳುವುದು ಸರಿ ಹೋಗಲ್ಲ. ಎಲ್ಲರ ಸಹಕಾರ, ನೆರವಿನಿಂದ ಪಕ್ಷ ಅಧಿಕಾರಕ್ಕೆ ಬಂದಿರುವುದು ಎಂದು ಅವರು ಮಾರ್ಮಿಕವಾಗಿ ಹೇಳಿದರು.
ನೀವು ಸಿಎಂ ರೇಸ್‌ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ನಾನು ಯಾವಗಲೂ ರೇಸ್‌ನಲ್ಲೇ ಇರುತ್ತೇನೆ. ಪಕ್ಷ ಅಧಿಕಾರಕ್ಕೆ ಬಂದ ವೇಳೆ ಕೆಪಿಸಿಸಿ ಅಧ್ಯಕ್ಷರಿಗೆ ಒಂದು ಅವಕಾಶ ಕೊಡುತ್ತಾರೆ. ಇನ್ನು ಕೆಲವು ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ಹಿಂದೆ ನಾನು ಅಧ್ಯಕ್ಷನಾಗಿದ್ದ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೆವು ಎಂಬುದನ್ನು ಗೃಹ ಸಚಿವರು ನೆನಪಿಸಿದಾಗ, ಆ ಕನಸು ಈಗ ಈಡೇರುತ್ತದೆಯೇ ಎಂಬ ಪ್ರಶ್ನೆಗೆ, ನನಗೆ ಆ ಕನಸೇ ಬಿದ್ದಿಲ್ಲವಲ್ಲ ಎಂದರು.
ಸಿಎಂ ಬದಲಾವಣೆಯ ಕೂಗು ಬಂದರೆ ನಿಮ್ಮನ್ನು ಪರಿಗಣಿಸುವಂತೆ ಹೇಳುತ್ತೀರಾ ಎಂಬ ಪ್ರಶ್ನೆಗೆ ಆ ಸಂದರ್ಭ ಬರಲಿ, ಆ ಸಂದರ್ಭ ಇನ್ನು ಬಂದಿಲ್ಲ. ಎಐಸಿಸಿ ಅಧ್ಯಕ್ಷರನ್ನು ನಾನು ಭೇಟಿ ಮಾಡಲು ಹೋಗಲ್ಲ. ನನಗೆ ಬೇಕೆನಿಸಿದಾಗ ನಾನು ಅವರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವೇನು ಬಿಜೆಪಿಯವರ ಸರ್ಟಿಫಿಕೇಟ್ ಕೇಳುತ್ತಿಲ್ಲ, ಅವರ ಮನೆ ಹೇಗಿದೆ ಎಂಬುದನ್ನು ನೋಡಿಕೊಳ್ಳಲಿ. ಅಧ್ಯಕ್ಷನಾಗಿ ನಾನೇ ಮುಂದುವರೆಯುತ್ತೇನೆ ಎಂದು ವಿಜಯೇಂದ್ರ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಯ ಅಗತ್ಯ ಇದೆಯೇ, ಮೊದಲು ಅವರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿ, ಆ ಮೇಲೆ ನಮ್ಮನ್ನು ಕೇಳಲಿ ಎಂದು ತಿರುಗೇಟು ನೀಡಿದರು.




























