ಗೆಣಕೆಹಾಳು ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಮಾಬುಸುಬಾನಿ ದರ್ಗಾ ಸ್ವಚ್ಛತೆ.


ಸಂಜೆವಾಣಿ ವಾರ್ತೆ
ಕುರುಗೋಡು ಜ.14.
ತಾಲೂಕಿನ ಗೆಣಕೆಹಾಳು ಗ್ರಾಮದಲ್ಲಿ ಜ.12ರಂದು ಸೋಮವಾರ, ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ, ಧಾರ್ಮಿಕ ಕೇಂದ್ರಗಳ ಸ್ವಚ್ಛತೆ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಕುರುಗೋಡು ತಾಲೂಕು ಘಟಕದಿಂದ ಆಯೋಜಿಸಲಾಗಿತ್ತು. ಗೆಣಿಕೆಹಾಳು ಗ್ರಾಮದ ಮುಖ್ಯ ಬೀದಿಯಲ್ಲಿ ಇರುವ ಮಾಬುಸುಬಾನಿ ಮುಸಲ್ಮಾನರ ಧಾರ್ಮಿಕ ಕೇಂದ್ರ ದರ್ಗಾವನ್ನು ಅರ್ಚಕರ ನೇತೃತ್ವದಲ್ಲಿ, ಧರ್ಮಸ್ಥಳ ಸಂಸ್ಥೆ ಪದಾಧಿಕಾರಿಗಳು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕುರುಗೋಡು ವಲಯ ಮೇಲ್ವಿಚಾರಕರಾದ ಎಂ.ಪ್ರಭು ಸಾರ್ವಜನಿಕರಿಗೆ ಮಾಹಿತಿ ನೀಡಿ, ಗ್ರಾಮದಲ್ಲಿನ ದೇವಸ್ಥಾನಗಳನ್ನು, ದರ್ಗಗಳನ್ನು ಸ್ವಚ್ಛತೆಯಾಗಿ ಇಟ್ಟುಕೊಳ್ಳಬೇಕು. ಅದೇರೀತಿ ಮನೆಗಳನ್ನು, ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಗ್ರಾಮ ಸುಚಿತ್ವ ಹೊಂದಿದ್ದರೆ ಯಾವುದೇ ರೋಗಗಳು ಬರುವುದಿಲ್ಲ. ಮನೆ ಹತ್ತಿರ ಶೇಖರಣೆಯಾಗುವ ಕಸವನ್ನು ಗ್ರಾಮ ಪಂಚಾಯಿತಿ ವತಿಯಿಂದ ಬರುವ ಕಸದ ವಾಹನಗಳಲ್ಲಿ ಹಾಕಬೇಕು. ಗ್ರಾಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿ, ದರ್ಗಾ ಶುಚಿಯಾಗಿ ಇಡಲು ಸುಚಿತ್ವ ಪರಿಕರದ ಕಿಟ್ಟನ್ನು ನೀಡಿದರು. ಶ್ರದ್ಧಾ ಕೇಂದ್ರ ಸ್ವಚ್ಛತೆ ಕಾರ್ಯಕ್ರಮದಲ್ಲಿ ಗ್ರಾಮ ಅಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿಗಳು, ಸ್ವಸಹಾಯ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.