ಗುರುಗಳಿಂದ ಮಾತ್ರ ಜ್ಞಾನ ಮತ್ತು ಮೌಲ್ಯ ಬೋಧಿಸುವ ಸಾಮರ್ಥ್ಯ – ಡಿ.ವಿ.ಸದಾನಂದ ಗೌಡ

ಸುಳ್ಯ ಸ.ಪ.ಪೂ. ಕಾಲೇಜಿನಲ್ಲಿ ಅಮೃತಮಹೋತ್ಸವ – ಗುರುವಂದನಾ ಕಾರ್ಯಕ್ರಮ.
ಸುಳ್ಯ:ಜ್ಞಾನ ಮತ್ತು ಮೌಲ್ಯಗಳನ್ನು ಭೋಧಿಸುವ ಸಾಮರ್ಥ್ಯ ಇರುವುದು ಗುರುಗಳು ಮಾತ್ರ. ಅಂತಹ ಮೌಲ್ಯಗಳು ಇರುವ ಶಿಕ್ಷಕ ರತ್ನಗಳನ್ನು ಖರೀದಿ ಮಾಡಲು ಸಾದ್ಯವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಅಮೃತಮಹೋತ್ಸವದ ಅಂಗವಾಗಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಗೌರವಿಸಿ ಮಾತನಾಡಿದರು. ಕಲ್ಲುಗಳನ್ನು ಕೆತ್ತಿ ಶಿಲ್ಪಗಳಾಗಿ ಬದಲಾಯಿಸಿದ ಕೀರ್ತಿ ಗುರುಗಳಿಗೆ ಸಲ್ಲಬೇಕು. ಭಗವಂತನಿಂದ ಆಗದ ಕೆಲಸಗಳನ್ನು ಶಿಕ್ಷಕರು ಮಾಡುತ್ತಿದ್ದಾರೆ. ಕೇವಲ ಸಂಘರ್ಷಕ್ಕಾಗಿ ಇಳಿದವನು ಗೆಲ್ಲಲು ಸಾಧ್ಯವಿಲ್ಲ. ಅವಮಾನವಾದಾಗ ಮಾತ್ರ ಮುಂದಿನ ದಾರಿ ಸಿಗಲು ಸಾಧ್ಯವಿದೆ. ಒಂದು ಕುಗ್ರಾಮವಾಗಿದ್ದ ಮಂಡೆಕೋಲಿನಿಂದ ನನ್ನನ್ನು ದೆಹಲಿಯ ಸಂಸತ್ತಿಗೆ ಏರಿಸಿದ ಕೀರ್ತಿ ಮುಂಭಾಗದಲ್ಲಿ ಕುಳಿತಿರುವ ಶಿಕ್ಷಕರಿಗೆ ಸಲ್ಲುತ್ತದೆ. ತಾಂತ್ರಿಕ ಸಮಾಜದಲ್ಲಿ ಸಮಾಜದಲ್ಲಿ ಮನುಷ್ಯತ್ವ ಕಡಿಮೆ ಆಗುತ್ತಿದೆ.
ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಂಸ್ಕಾರ, ಸಂಸ್ಕೃತಿ ಕಡಿಮೆಯಾಗುತ್ತಿದೆ. ಸಂಸ್ಕಾರ ಕಲಿಸುವ ಶಾಲೆಗಳು ಸಮಾಜದಲ್ಲಿ ಉನ್ನತವಾಗಿ ಬೆಳೆಯುತ್ತದೆ. ಬಾಲ್ಯದಲ್ಲಿ ಸಿಗುವ ಶಿಕ್ಷಣ ಅಂತಹ ಶಾಲೆಯಲ್ಲಿ ಕಲಿತವರು ಉನ್ನತ ಸ್ಥಾನವನ್ನು ಪಡೆಯುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್ ಅಂಗಾರ ವಹಿಸಿ ಮಾತನಾಡಿ ಸುಳ್ಯದ ಜೂನಿಯರ್ ಕಾಲೇಜು ಹಲವು ಮಂದಿ ಸಾಧಕರನ್ನು ಕೊಡುಗೆಯಾಗಿ ನೀಡಿದೆ. ಇಲ್ಲಿ ಕಲಿತಂತಹ ನೂರಾರು ಮಂದಿ ಶಾಲೆಗೆ ಹಲವು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅಂತವರನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕುಲಪತಿ ಡಾ.ಚಿದಾನಂದ ಗೌಡ ಕೊಳಂಬೆ, ನಿವೃತ್ತ ಐಎಫ್ ಎಸ್ ಅಧಿಕಾರಿ ಸುಂದರ ನಾಯ್ಕ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಜ್ ಮಾತನಾಡಿದರು.
ವೇದಿಕೆಯಲ್ಲಿ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತರಾಮ ರೈ, ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಲಿಂಗಪ್ಪ ಗೌಡ ಕೇರ್ಪಳ, ಕಾಲೇಜಿನ ಪ್ರಾಂಶುಪಾಲ ಮೋಹನ್ ಕುಮಾರ್ ಬೊಮ್ಮೆಟ್ಟಿ, ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ ಸದಾಶಿವ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಮಂಜುಳ ಬಡಿಗೇರ್ , ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ, ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಉಪಸ್ಥಿತರಿದ್ದರು.ಪಿ.ಬಿ ಸುಧಾಕರ ರೈ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಶಿವಪ್ರಸಾದ್ ಆಲೆಟ್ಟಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಫೋಟೋ