ಗುಂಡಿಮಯವಾದ ರಸ್ತೆಗಳು: ತೇಪೆ ಹಚ್ಚುವ ಕಾರ್‍ಯ ಚುರುಕು

ನಗರದ ಸಂಪಂಗಿರಾಮ ನಗರದ ೭ನೇ ಮುಖ್ಯರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದು ಮಳೆ ನೀರು ತುಂಬಿಕೊಂಡಿದ್ದು, ದ್ವಿಚಕ್ರ ವಾಹನ ಸವಾರರು ಓಡಾಡಲು ಹರಸಾಹಸ ಪಡುತ್ತಿರುವುದು.

ಬೆಂಗಳೂರು, ಸೆ.೧೮-ಸ್ವಚ್ಛ ಮತ್ತು ಸುಗಮ ಸಂಚಾರಕ್ಕಾಗಿ ಬೆಂಗಳೂರಿನಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲು ನವೆಂಬರ್ ಅಂತ್ಯದವರೆಗೂ ಸರ್ಕಾರ ಡೆಡ್ ಲೈನ್ ಕೊಟ್ಟಿರುವ ಹಿನ್ನೆಲೆ ಜಿಬಿಎ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ.


ಇಲ್ಲಿನ ಆರ್.ಆರ್. ನಗರ ವ್ಯಾಪ್ತಿಯ ಕೊಟ್ಟೇಗೆಪಾಳ್ಯದಲ್ಲಿ ಅತಿ ಹೆಚ್ಚು ರಸ್ತೆಗುಂಡಿಗಳು ಕಂಡ ಬಂದ ಹಿನ್ನೆಲೆ ಗುರುವಾರ ಪಶ್ಚಿಮ ನಗರ ಪಾಲಿಕೆ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೈಗೊಂಡರು.ಇತ್ತ ಬೆಂಗಳೂರು ಕೇಂದ್ರ ನಗರ ಚಿಕ್ಕಪೇಟೆ ವಿಭಾಗದ ವ್ಯಾಪ್ತಿಯ ಮೌಂಟ್ ಜಾಯ್ ರಸ್ತೆಯಲ್ಲಿ ಕೋಲ್ಡ್ ಮಿಕ್ಸ್‌ನೊಂದಿಗೆ ಗುಂಡಿಗಳನ್ನು ಮುಚ್ಚುವ ಕಾರ್ಯ ಮುಂದುವರೆದಿದೆ. ಹೀಗೆ, ಗುರುವಾರ ಮಧ್ಯಾಹ್ನದವರೆಗೂ ೨೨೦ಕ್ಕೂ ಅಧಿಕ ರಸ್ತೆ ಗುಂಡಿ ಮುಚ್ಚಲಾಗಿದೆ.

ನಗರದ ಮಾಗಡಿ ಮುಖ್ಯರಸ್ತೆ, ಸುಮನ ಹಳ್ಳಿಯ ಸರ್ವೀಸ್ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು. ಸಂಬಂಧಪಟ್ಟವರು ಈ ಗುಂಡಿಗಳನ್ನು ಮುಚ್ಚುವರೇ?

ರಾಜ್ಯ ಸರ್ಕಾರವು ೬೯ ರಸ್ತೆಗಳು ಗುಂಡಿಮಯವಾಗಿರುವುದಾಗಿ ಮಾಹಿತಿ ನೀಡಿದ್ದು, ಜಿಬಿಎ ಮೂಲಭೂತ ಸೌಕರ್ಯ ವಿಭಾಗದ ಅಂಕಿಅಂಶಗಳ ಪ್ರಕಾರ, ೪೮೫ ರಸ್ತೆಗಳು ಗುಂಡಿಗಳಿಲ್ಲ. ಕಳೆದ ೨ ವರ್ಷಗಳಲ್ಲಿ, ರಸ್ತೆ ಗುಂಡಿಗಳನ್ನು ಮುಚ್ಚಲು ಸರ್ಕಾರವು ೧೯ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ೨೦೨೩-೨೪ ಸಾಲಿನಲ್ಲಿ ೭ ಕೋಟಿ ಮತ್ತು ೨೦೨೪-೨೫ ಸಾಲಿನಲ್ಲಿ ೧೨.೨೫ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಯೋಜಿಸಿದೆ. ೨೦೨೪-೨೫ ರಲ್ಲಿ ೧,೭೮,೭೯೨ ಚದರ ಮೀಟರ್ ಮತ್ತು ೨೦೨೩-೨೪ ರಲ್ಲಿ ೧,೦೭,೭೭೧ ಚದರ ಮೀಟರ್ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ.

ಆದರೆ, ಇನ್ನೂ ಹಲವಾರು ರಸ್ತೆಗಳಲ್ಲಿಯೂ ಗುಂಡಿಗಳು ಇವೆ, ಮತ್ತು ಈ ಗುಂಡಿಗಳನ್ನು ನಿಗದಿತ ಸಮಯದಲ್ಲಿ ಮುಚ್ಚಲು ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಸರ್ಕಾರವು ಸ್ವಚ್ಛ ಬೆಂಗಳೂರು ಮತ್ತು ಸುಗಮ ಸಂಚಾರವನ್ನು ಗುರಿಯಾಗಿ ಹೊಂದಿದ್ದು, ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಪ್ರಯತ್ನಿಸುತ್ತಿದೆ.

ಎಚ್ಚೆತ್ತು ಗಡುವು ನೀಡಿದ ಸರ್ಕಾರ..!
ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಕುರಿತು ಚರ್ಚೆಗಳು ತೀವ್ರಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಐಟಿ ದಿಗ್ಗಜರು ಮತ್ತು ಇತರರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಂತೆಯೇ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡಿದೆ.
ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ಗುತ್ತಿಗೆದಾರರಿಗೆ ನವೆಂಬರ್ ತಿಂಗಳ ಒಳಗೆ ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲು ಅಂತಿಮ ಗಡುವು ನೀಡಿದ್ದಾರೆ.
ನಿನ್ನೆ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಲಾಜಿಸ್ಟಿಕ್ಸ್ ಟೆಕ್ ಪ್ಲಾಟ್‌ಫಾರ್ಮ್ ಬ್ಲಾಕ್‌ಬಕ್‌ನ ಸಹ-ಸಂಸ್ಥಾಪಕ ರಾಜೇಶ್ ಯಾಬಾಜಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿಗೆ ಗುಡ್ ಬೈ ಹೇಳುವ ಮಾತುಗಳನ್ನು ಹಂಚಿಕೊಂಡಿದ್ದರು.
ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಐಟಿ ಬಿಟಿ ಸಚಿವ ನಾರಾ ಲೋಕೇಶ್, ಯಾಬಾಜಿಗೆ ಆಂಧ್ರಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಕಂಪನಿಗಳು ಹೊರರಾಜ್ಯಕ್ಕೆ ತೆರಳುತ್ತಿವೆ ಎಂದು ಪ್ರತಿಪಕ್ಷದವರೂ ಕೂಡ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.