
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಆ.29 ರಕ್ಷಾಬಂಧನದ ನಿಮಿತ್ತ ಗದ್ದಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ‘ವೃಕ್ಷ ಬಂಧನ’ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶಾಲೆಯ ಮಕ್ಕಳು ಗಿಡಗಳನ್ನು ಸಿಂಗರಿಸಿ, ಅವುಗಳಿಗೆ ರಾಖಿ ಕಟ್ಟುವ ಮೂಲಕ ವೃಕ್ಷ ಬಂಧನ ಆಚರಿಸಿದರು. ಅಲ್ಲದೆ, ತಾವು ಕಟ್ಟಿದ ರಾಖಿಯಂತೆ ಗಿಡಗಳ ರಕ್ಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡರು.
ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಗಿಡಗಳನ್ನು ವಿದ್ಯಾರ್ಥಿಗಳು ದತ್ತು ಪಡೆದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ನಾಗೇಂದ್ರಪ್ಪ ಬಿ. ಮೇವುಂಡಿ, ಮಾತನಾಡಿ “ಪರಿಸರ ಪ್ರಜ್ಞೆ ಜಾಗೃತವಾದಾಗ ಮಾತ್ರ ನೈಸರ್ಗಿಕ ಅವಘಡಗಳನ್ನು ತಡೆಗಟ್ಟಲು ಸಾಧ್ಯ. ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಗಿಡಗಳನ್ನು ನೆಟ್ಟು ಬೆಳೆಸುವ ಮನೋಭಾವ ಮಕ್ಕಳಲ್ಲಿ ಬಾಲ್ಯದಿಂದಲೇ ಮೂಡಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜುನಾಥ ಟಿ.ಎಸ್., ಕೊಟ್ರೇಶ ಬಿ., ಗೀತಾ, ರಾಜೇಶ್ವರಿ ಪಿ., ಗಾಯತ್ರಿ ಬಿ.ಆರ್., ದ್ವಿದಸ ಹಾಗೂ ನೀಲಮ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು.































