Home ಜಿಲ್ಲೆ ಬೆಂಗಳೂರು ಗಣಿಗಾರಿಕೆ ಕಾನೂನು ಸಡಿಲಿಕೆಗೆ ಹಲವು ನಿರ್ಣಯ ಅಂಗೀಕಾರ

ಗಣಿಗಾರಿಕೆ ಕಾನೂನು ಸಡಿಲಿಕೆಗೆ ಹಲವು ನಿರ್ಣಯ ಅಂಗೀಕಾರ

ಬೆಂಗಳೂರು, ಫೆ.13:- ಭೋವಿ (ವಡ್ಡರ) ಪಾರಂಪರಿಕ ಕುಲಕಸುಬು, ಗಣಿಗಾರಿಕೆ ಮಾಡಲು ಕಾನೂನನ್ನು ಸಡಲೀಕರಣಗೊಳಿಸುವ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್.ಎಸ್.ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.


ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯದ ಭೋವಿ ಜನಾಂಗದ ಕುಲಕಸುಬು ನಮ್ಮ ಹಕ್ಕು ಎರಡನೇ ಭಾಗವಾಗಿ ಸಮಾಜದ ಮುಖಂಡರು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶತಶತಮಾನಗಳಿಂದ ಭೋವಿ ಜನಾಂಗದವರು ಕಲ್ಲು ಒಡೆದು ಮನೆಗೆ ಬೇಕಾಗಿರುವ ಒಳಕಲ್ಲು, ಬೀಸುವ ಕಲ್ಲು, ದಿಂಡು, ಜಲ್ಲಿಕಲ್ಲು, ಮೂರ್ತಿಗಳು, ದೇವರವಿಗ್ರಹಗಳ ಕೆತ್ತನೆ ಸೇರಿ ಹಲವು ಜನ ಉಪಯುಕ್ತ ಮಾಡಿ ಬದುಕುತ್ತಿರುವ ಕುಲಕಸುಬು ಕಿತ್ತುಗೊಳ್ಳಬಾರದೆಂದು ಮತ್ತು ಈಗಿರುವ ಕೆಲವು ಕಾನೂನುಗಳನ್ನು ಸಡಿಲೀಕರಣಗೊಳಿಸಬೇಕು. ಕುಲಕಸುಬುದಾರರಿಗೆ ಅನುಕೂಲವಾಗಲು ಹಲವು ನಿರ್ದೇಶನಗಳನ್ನು ಆಯಾಯ ವ್ಯಾಪ್ತಿಯ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ, ಉಪನಿರ್ದೇಶಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಸಚಿವ ಶಿವರಾಜ್.ಎಸ್.ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.


ಕಡುಬಡತನ, ಕೂಲಿಮಾಡುವ, ಕಲ್ಲು ಒಡೆದು ಜೀವನ ಸಾಗಿಸುವ ಜನಾಂಗದ ಮೇಲೆ ಪದೇಪದೇ ದಬ್ಬಾಳಿಕೆ, ಹಲ್ಲೆ, ಕೊಲೆ ಬೆದರಿಕೆ ನಡೆಯುತ್ತಿವೆ. ಕೆಲವು ಕಡೆ ಅಧಿಕಾರಿಗಳು ಬಂಡವಾಳ ಶಾಹಿಗಳ ಜೊತೆ ಸೇರಿಕೊಂಡು ಭೋವಿ ಜನಾಂಗಕ್ಕೆ ಸಿಗಬೇಕಾದ ಗಣಿಗಾರಿಕೆ ತಪ್ಪಿಸುತ್ತಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದರು.
ಏಕಗವಾಕ್ಷಿ ಅಡಿಯಲ್ಲಿ ಅರ್ಜಿಹಾಕುವ ಭೋವಿ ಜನಾಂಗದವರಿಗೆ ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ತಲಾ ಎರಡು ಎಕರೆ ಕ್ವಾರಿಯನ್ನು ಮಂಜೂರು ಮಾಡಬೇಕು. ಕಲ್ಲು ಕುಟಿಕರ ಸಹಕಾರ ಸಂಘಗಳಿಗೆ ತಲಾ 5 ಎಕರೆ ಜಮೀನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸಭೆಯಲ್ಲಿ ಮಾತನಾಡಿ ಮುಂದೆ ಭೋವಿ ಜನಾಂಗದವರು ನಿರ್ವಹಿಸಿಕೊಂಡು ಬರುತ್ತಿರುವ ಕುಲಕಸುಬಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗಾವಹಿಸಲಾಗುವುದು ಎಂದು ಭರವಸೆ ನೀಡಿದರು.


ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮು ಮನವಿ ಪತ್ರ ನೀಡಿ ಮಾತನಾಡಿ ಅಧಿಸೂಚನೆ ಪತ್ರದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರು ಅರ್ಜಿ ಸಲ್ಲಿಸಬಹುದು ಎಂದು ಇರುತ್ತದೆ. ಸಾಂಪ್ರದಾಯಿಕ ಕುಲಕಸುಬು ಎಂದರೆ ಅದು ಭೋವಿ (ವಡ್ಡರು) ಮಾತ್ರ ಅದನ್ನು ಬದಲಿಸಿ. 31Zಅ ಅರ್ಜಿಗಳನ್ನು ಭೋವಿ(ನಮ್ಮವರು) ಕೆಲಸ ಮಾಡುತ್ತಿರುವ ಜಾಗಗಳಲ್ಲಿ ಅರ್ಜಿ ಸಲ್ಲಿಸಿದ್ದರೆ ಅವರನ್ನೇ ಪರಿಗಣಿಸಿ ಭೋವಿ ಜನಾಂಗದ ಕುಲಕಸುಬು ಗಣಿಗಾರಿಕೆ ಆಗಿರುತ್ತದೆ. ಮತ್ತು ಜಾತಿ ಸರ್ಟಿಫಿಕೇಟ್ ಇದ್ದರೂ ಮತ್ತೆ ಈತ ಕುಲಕಸುಬು ಮಾಡುವವರಾ ಎಂದು ತಾಲ್ಲೂಕು ದಂಡಾಧಿಕಾರಿಗಳಿಂದ ಇತರ ಕುಲಕಸುಬು ಮಾಡುವವರಾ ಎಂದು ಸರ್ಟಿಫಿಕೇಟ್ ತರಬೇಕು ಎಂದು ನೀಡಿರುವ ಆದೇಶ ರದ್ದು ಮಾಡಬೇಕು ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಜಿ.ಪಂ. ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಮೈಸೂರು ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಎಸ್.ವಿಜಯಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಮಧುಸೂಧನರೆಡ್ಡಿ ಸೇರಿದಂತೆ ಭೋವಿಜನಾಂಗದ ಮುಖಂಡರು ಇದ್ದರು.