
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.26: ನಗರದ ಬಿಎಂ ಸಿಅರ್ ಸಿ ಮೈದಾನದಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪೊಲೀಸ್, ಗೃಹ ರಕ್ಷಕ ದಳ, ಎನ್ ಸಿ ಸಿ, ಸೇವಾದಳ, ಶಾಲಾ ಮಕ್ಕಳ 30 ತುಕಡಿಗಳಿಂದ ಧ್ವಜವಂದನೆ ಸ್ವೀಕರಿಸಿದರು
ಈ ವೇಳೆ ಮಾತನಾಡಿದ ರಹೀಂಖಾನ್, ಸಮಾಜವಾದ ತತ್ವ, ಪ್ರಜಾಪ್ರಭುತ್ವ, ಗಣರಾಜ್ಯದ ಮತ್ತು ಜಾತ್ಯತೀತ ತತ್ವದ ಸಾರ್ವಭೌಮತ್ವವನ್ನು ಭಾರತ ಆಳವಡಿಸಿಕೊಂಡಿದ್ದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶ, ಅನೇಕ ಭಾಷೆಗಳನ್ನು ಮಾತನಾಡುವ ಜನರನ್ನು ಹಾಗೂ ವಿವಿಧ ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿರುವುದು ವೈಶಿಷ್ಟಮಯವಾಗಿದೆ.
ಪ್ರೀತಿ ವಿಶ್ವಾಸ ಶಾಂತಿ ಸೌಹಾರ್ದತೆಯಿಂದ ಇರುವ ನಮ್ಮೊಳಗೆ ವಿಷ ಹಾಕುವ ಜನರಿದ್ದಾರೆ. ಎಲ್ಲರೂ ಜಾಗೃತರಾಗಿರಬೇಕು. ಯಾವುದೇ ಕಾರಣಕ್ಕೆ ದುಷ್ಟ ಶಕ್ತಿಗಳನ್ನು ಎದುರಿಸಲು ನಾವೆಲ್ಲ ಒಗ್ಗಟ್ಟಾಗಿರಬೇಕು ಭಾರತವನ್ನು ಜಗತ್ತಿನ ಅತ್ಯಂತ ಪ್ರಬುದ್ಧ, ಪ್ರಗತಿಪರ, ಭದ್ರ, ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ನಾವೆಲ್ಲಾ ಒಂದಾಗಿ ಪ್ರಯತ್ನಿಸೋಣ ಎಂದರು.
ರಾಜ್ಯದ ನಗರಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ, ಸ್ವಚ್ಚ ಭಾರತ್ ಮಿಷನ್, ಅಮೃತ 2.0 ಯೋಜನೆ. 15ನೇ ಹಣಕಾಸು ಯೋಜನೆಗಳ ಮೂಲಕ ಪ್ರಗತಿ ಸಾಧಿಸಲಾಗಿದೆ. ಕೂಲಿ ಕಾರ್ಮಿಕರ, ರೈತರ, ನಗರ ಬಡಜನರ, ಬಡವಿದ್ಯಾರ್ಥಿಗಳ ಹಸಿವನ್ನು ನೀಗಿಸಲು ಹೆಚ್ಚುವರಿ 188 ಇಂದಿರಾ ಕ್ಯಾಂಟಿನ್‌ಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯ್ತು. ನೂರಾರು ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತ್ ನಡೆಯಿತು.
ಸಂಸದ ಈ.ತುಕರಾಂ, ಮೇಯರ್ ಪಿ.ಗಾದೆಪ್ಪ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಡಿಸಿ ನಾಗೇಂದ್ರ ಪ್ರಸಾದ್ ಕೆ., ಜಿಪಂ ಸಿಇಓ ಮಹಮ್ಮದ್ ಹಾರೀಸ್ ಸುಮೇರ್, ಐಜಿಪಿ ಡಾ.ಹರ್ಷ ಎಸ್ಪಿ ಸುಮನ್ ಡಿ.ಪೆನ್ನೇಕರ್ ಮೊದಲಾದವರು ಇದ್ದರು.























