
ಸಂಜೆವಾಣಿ ನ್ಯೂಸ್
ಮೈಸೂರು: ಮೇ.31:- ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 84ನೇ ಜನ್ಮದಿನೋತ್ಸವವನ್ನು ಅತ್ಯಂತ ಸಡಗರ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಇಂದು ಆಶ್ರಮದ ವತಿಯಿಂದ ಸಮಾಜದ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ವಿವಿಧ ನೆರವು ನೀಡುವುದರ ಜತೆಗೆ ವೈದ್ಯಕೀಯ ಉಪಕರಣಗಳನ್ನು ವಿತರಿಸುವ ಮೂಲಕ ಶ್ರೀಗಳು ಸಮಾಜಮುಖಿ ಕಳಕಳಿಯನ್ನು ಮೆರೆದಿದ್ದಾರೆ.
ಕರ್ನಾಟಕ ಸರ್ಕಾರದ ಮೈಸೂರು ವಿಭಾಗದ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಇಲಾಖೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಂIISಊ) ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ (Sಗಿಙಒ) ಸಂಸ್ಥೆಗಳ ಜಂಟಿ ಸಲಹೆ ಮತ್ತು ಸಹಯೋಗದೊಂದಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಈ ಕೊಡುಗೆಗಳನ್ನು ಹಸ್ತಾಂತರಿಸಲಾಯಿತು.
ಒಟ್ಟು 89 ವೈದ್ಯಕೀಯ ಉಪಕರಣಗಳ ವಿತರಣೆ:ಆಶ್ರಮದ ವತಿಯಿಂದ ವಿತರಿಸಲಾದ ಒಟ್ಟು 89 ಅತ್ಯಾಧುನಿಕ ಹಾಗೂ ಅಗತ್ಯ ಉಪಕರಣಗಳ ವಿವರ: ವೀಲ್ ಚೇರ್ (ಚಕ್ರದ ಕುರ್ಚಿ) 21, ಕಮೋಡ್ ವೀಲ್ ಚೇರ್ 02, ವಾಕರ್ಸ್ 09, ಕ್ರಚಸ್ (ಬಗಲುಗೋಲು) 09, ಎಲ್ಬೊ ಕ್ರಚಸ್ 01, ವಾಕಿಂಗ್ ಸ್ಟಿಕ್ (ಊರುಗೋಲು) 05, ವೈಟ್ ಕೇನ್ (ಅಂಧರ ಊರುಗೋಲು) 08 ವಿಶೇಷ ಸಿ.ಪಿ. ಚೇರ್ (ಮೈಸೂರು ವಿಭಾಗದ ವಿಕಲಚೇತನರ ಇಲಾಖೆ ನೆರವಿನಡಿ) 18, ವಿಶೇಷ ಸಿ.ಪಿ. ಚೇರ್ (ವಾಕ್ ಮತ್ತು ಶ್ರವಣ ಸಂಸ್ಥೆಯ ನೆರವಿನಡಿ) 16
ಶ್ರೀರಾಮ ಮಂದಿರ ಪುನರ್ ನಿರ್ಮಾಣಕ್ಕೆ 10 ಲಕ್ಷ ಧನಸಹಾಯ.
ಇದೇ ಪಾವನ ಸಂದರ್ಭದಲ್ಲಿ, ಮೈಸೂರಿನಕೃಷ್ಣಮೂರ್ತಿಪುರಂನಲ್ಲಿರುವ ಪ್ರಸಿದ್ದ ಶ್ರೀರಾಮ ಮಂದಿರದ ಪುನರ್ ನಿರ್ಮಾಣ ಕಾರ್ಯಕ್ಕಾಗಿ ಆಶ್ರಮದ ವತಿಯಿಂದ 10 ಲಕ್ಷ ರೂ ಆರ್ಥಿಕ ಸಹಾಯದ ಚೆಕ್ಕನ್ನು ದೇವಸ್ಥಾನದ ಸಮಿತಿಗೆ ಹಸ್ತಾಂತರಿಸಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಆಶ್ರಮದ ಬೆಂಬಲವನ್ನು ಘೋಷಿಸಲಾಯಿತು.
ಆಶ್ರಮದ ಭವ್ಯ ‘ನಾದ ಮಂಟಪ’ದಲ್ಲಿ ಜರುಗಿದ ಈ ಸಮಾರಂಭವು ಪರಮ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹಾಗೂ ಪೂಜ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಯಶಸ್ವಿಯಾಗಿ ನೆರವೇರಿತು. ನೂರಾರು ಭಕ್ತಾದಿಗಳು ಈ ಮಾನವೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.





























