
ಸಂಜೆವಾಣಿ ನ್ಯೂಸ್
ಮೈಸೂರು:ಮೇ.27:- ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ಜನ್ಮದಿನಾಚರಣೆ ವಿಶೇಷವಾಗಿ ನೆರವೇರಿತು.
ಶ್ರೀಗಳ ಜನ್ಮದಿನಾಚರಣೆ ಪ್ರಯುಕ್ತ ಸೋಮವಾರ ಬೆಳಗ್ಗೆ 8 ಗಂಟೆಗೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರ ಹೋಮ, ಆಯುಷ್ಯ ಹೋಮ, ರುದ್ರ ಅಭಿಷೇಕ ನೆರವೇರಿಸಲಾಯಿತು. ನಂತರ ಗಣಪತಿ ಶ್ರೀಗಳನ್ನು ಅಲಂಕೃತ ಸಾರೋಟ್ ನಲ್ಲಿ ಪ್ರಾರ್ಥನಾ ಮಂದಿರದಿಂದ ನಾದಮಂಟಪದ ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ನಾದ ಮಂಟಪದಲ್ಲಿ ಶ್ರೀ ಚಕ್ರ ಪೂಜೆ ನೆರವೇರಿಸಿ, ನಂತರ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಪ್ರತ್ಯಕ್ಷ ಪಾದ ಪೂಜೆಯನ್ನು ಅವಧೂತ ದತ್ತಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೆರವೇರಿಸಿ, ಪುಷ್ಪ ನಮನ ಸಲ್ಲಿಸಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಜನುಮದಿನದ ಸಂದರ್ಭವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿ ಗೌರವ ಸಮರ್ಪಿಸಿದ್ದು ವಿಶೇಷವಾಗಿತ್ತು. ಆರ್‍ಬಿಐನ ಹೈದರಾಬಾದ್ ಶಾಖೆಯ ವ್ಯವಸ್ಥಾಪಕಿ ಪಿ.ವಿಜಯಲಕ್ಷ್ಮಿ ನಾಣ್ಯಗಳನ್ನು ಸ್ವಾಮೀಜಿಯವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಗಣಪತಿ ಶ್ರೀಗಳು, ಹರೀಃ ಓಂ ನಮಃ ಶಿವಾಯ ಮಂತ್ರ ಪಠಣ ಮಾಡಿದರೆ ಎಲ್ಲರಿಗೂ ಒಳಿತಾಗಲಿದೆ. ಬೇರೆಯವರಿಗೆ ಅನ್ಯಾಯ ಮಾಡಬಾರದು ಎಂದು ತಿಳಿ ಹೇಳಿದರು.
ನಾವೆಲ್ಲ ಸನಾತನ ಧರ್ಮವನ್ನು ರಕ್ಷಿಸಬೇಕು. ಧರ್ಮ ಮಾರ್ಗದಲ್ಲಿ ನಡೆಯುವವರನ್ನು ಭಗವಂತ ರಕ್ಷಿಸುತ್ತಾನೆ. ಅಧರ್ಮ ಮಾಡುವವರನ್ನು ಶಿಕ್ಷಿಸುತ್ತಾನೆ ಎಂದು ಶ್ರೀಗಳು ನುಡಿದರು. ನಿನ್ನೆಯಷ್ಟೇ ಭಾರತ ಸೇನೆಗೆ 25 ಲಕ್ಷ ಕಾಣಿಕೆ ಸಮರ್ಪಿಸಿದ್ದೇವೆ, ಕಷ್ಟಗಳು ಬರುತ್ತವೆ ಹಾಗೇ ಹೋಗುತ್ತವೆ. ಆ ಭಗವಂತನನ್ನು ನಂಬಿ ಪ್ರಾರ್ಥಿಸಿದರೆ ಎಲ್ಲವೂ ಪರಿಹಾರವಾಗುತ್ತದೆ ಎಂದು ತಿಳಿಸಿದರು. ಪಾದಪೂಜೆ ನಂತರ ಚೈತನ್ಯ ಅರ್ಚನ-ದತ್ತ ಪೀಠದ ಬಿರುದು ಪ್ರದಾನ ಮಾಡಲಾಯಿತು.