ಗಜಪಡೆಯ ಆತಿಥ್ಯಕ್ಕೆ ಅರಮನೆಯಲ್ಲಿ ಸಿದ್ಧತೆ

ಸಂಜೆವಾಣಿ ನ್ಯೂಸ್
ಮೈಸೂರು.ಆ.02:
– ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗಿಯಾಗಲಿರುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಆತಿಥ್ಯ ನೀಡಲು ಅರಣ್ಯ ಇಲಾಖೆ ಮತ್ತು ಮೈಸೂರು ಅರಮನೆ ಮಂಡಳಿ ಸಜ್ಜಾಗಿದೆ.


ಈ ಬಾರಿ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲು ಸರ್ಕಾರ ತೀರ್ಮಾನಿಸಿದ್ದು, ಅದಕ್ಕಾಗಿ ಸಾಂಸ್ಕøತಿಕ ನಗರಿ ಸಜ್ಜಾಗುತ್ತಿದೆ. ಮಾವುತರು, ಕಾವಾಡಿಗಳು ಮತ್ತು ಕುಟುಂಬ ಸದಸ್ಯರು ಪ್ರತಿವರ್ಷದಂತೆ ದಸರಾ ಉತ್ಸವದ ಭಾಗವಾಗಲಿದ್ದಾರೆ. ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಯ ವಾಸ್ತವ್ಯಕ್ಕಾಗಿ ಅರಮನೆ ಅಂಗಳದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆನೆಗಳು, ಮಾವುತರು ಹಾಗೂ ಕಾವಾಡಿಗಳು ಉಳಿದುಕೊಳ್ಳಲು 40ಕ್ಕೂ ಹೆಚ್ಚು ಶೆಡ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.


ಈ ಬಾರಿಯ ದಸರೆಯಲ್ಲಿ ಮೊದಲ ತಂಡದಲ್ಲಿ 9 ಆನೆಗಳು, ಎರಡನೇ ತಂಡದಲ್ಲಿ 5 ಸೇರಿದಂತೆ ಒಟ್ಟು 14 ಆನೆಗಳು ಭಾಗಿಯಾಗಲಿವೆ. ಆನೆಗಳ ಜತೆಯಲ್ಲೇ ಮಾವುತರು ಮತ್ತು ಕಾವಾಡಿಗಳು, ವಿಶೇಷ ಮಾವುತರು ಸೇರಿದಂತೆ ಅವರ ಕುಟುಂಬ ಸದಸ್ಯರನ್ನು ದಸರಾ ಉತ್ಸವಕ್ಕೆ ಕರೆತರಲಾಗುತ್ತದೆ. ಆದ್ದರಿಂದ ಮಾವುತರು ಮತ್ತು ಕಾವಾಡಿಗಳಿಗೆ ಶೆಡ್‍ಗಳನ್ನು ನಿರ್ಮಿಸುವ ಹಾಗೂ ಆನೆಗಳನ್ನು ಕಟ್ಟಿ ಹಾಕುವ ಸ್ಥಳಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಾರದ ಹಿಂದೆಯೇ ಪರಿಶೀಲನೆ ಮಾಡಿದ್ದಾರೆ. ಅರಮನೆ ಅಂಗಳದಲ್ಲಿರುವ ಕಾಯಂ ಕಾಂಕ್ರೀಟ್ ಪ್ಲಾಟ್‍ಫಾರ್ಮ್ ಮೇಲೆ ಶೆಡ್‍ಗಳನ್ನು ನಿರ್ಮಿಸಲಾಗುತ್ತಿದೆ. ಇದರೊಂದಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ ಇನ್ನಿತರ ಮೂಲಸೌಕರ್ಯ ಕಲ್ಪಿಸುವ ಕಾರ್ಯಗಳು ನಡೆಯುತ್ತಿವೆ.


ಗಜಪಡೆ ಅರಮನೆ ಆವರಣಕ್ಕೆ ಪ್ರವೇಶಿಸಿದ ಬಳಿಕ ದಸರಾ ಆನೆಗಳನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಆನೆಗಳು ಬೀಡು ಬಿಡುವ ಸ್ಥಳದಲ್ಲಿ ಪ್ರತಿಬಾರಿಯಂತೆ ಮುಂಜಾಗ್ರತೆಯಾಗಿ ಸಿಸಿ ಕ್ಯಾಮರಾ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಆನೆಗಳಿಗೆ ಆಹಾರ ತಯಾರಿಸುವ ಸ್ಥಳ ಸೇರಿದಂತೆ ಆಯ್ದ ಜಾಗಗಳಲ್ಲಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಪೆÇಲೀಸರು ಇದ್ದರೂ ಪ್ರವಾಸಿಗರು ಫೆÇೀಟೋ, ಸೆಲ್ಫಿ ತೆಗೆದುಕೊಳ್ಳುವ ಸಲುವಾಗಿ ಆನೆಗಳ ಬಳಿ ಹೋಗುವ ಪ್ರಯತ್ನ ಮಾಡುತ್ತಾರೆ. ಇದನ್ನೆಲ್ಲ ಸೂP್ಷÀ್ಮವಾಗಿ ಗಮನಿಸಲು ಕ್ಯಾಮರಾ ಅಳವಡಿಕೆಯಿಂದ ಅನುಕೂಲವಾಗಲಿದೆ.


ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ನಾಲ್ಕು ಹೆಣ್ಣಾನೆಗಳು ಸೇರಿದಂತೆ ಒಟ್ಟು 14 ಆನೆಗಳು ಭಾಗಿಯಾಗುತ್ತಿವೆ. 14 ಆನೆಗಳ ಪೈಕಿ 9 ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಮತ್ತೀಗೋಡು ಶಿಬಿರದ ಭೀಮ, ದುಬಾರೆ ಶಿಬಿರದ ಕಂಜನ್, ಧನಂಜಯ, ಪ್ರಶಾಂತ, ಬಳ್ಳೆ ಶಿಬಿರದ ಮಹೇಂದ್ರ, ದೊಡ್ಡಹರವೆ ಶಿಬಿರದ ಏಕಲವ್ಯ, ದುಬಾರೆ ಶಿಬಿರದ ಕಾವೇರಿ ಹಾಗೂ ಬಳ್ಳೆಯ ಲಕ್ಷ್ಮೀ ಆನೆಗಳು ಆಗಮಿಸಲಿವೆ.


ಮಕ್ಕಳಿಗೆ ಟೆಂಟ್ ಶಾಲೆ: ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರ 50ಕ್ಕೂ ಹೆಚ್ಚು ಮಕ್ಕಳು ದಸರೆಯಲ್ಲಿ ಭಾಗವಹಿಸಲಿದ್ದಾರೆ. ಈ ಮಕ್ಕಳಿಗಾಗಿ ಅರಮನೆ ಅಂಗಳದಲ್ಲಿ ಟೆಂಟ್ ಶಾಲೆ ನಿರ್ಮಿಸಲಾಗುತ್ತಿದೆ. ಜತೆಗೆ, ಗ್ರಂಥಾಲಯ, ಆಯುರ್ವೇದ ಚಿಕಿತ್ಸಾಲಯವನ್ನೂ ತೆರೆಯಲಾಗುತ್ತಿದೆ. ಈ ಬಾರಿಯೂ ಆನೆಕೊಳದ ಸಮೀಪದ ಕಟ್ಟಡದಲ್ಲಿಯೇ ಟೆಂಟ್ ಶಾಲೆಗೆ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಇದೆ.