ಸಂಜೆವಾಣಿ ನ್ಯೂಸ್
ಮೈಸೂರು: ಅ.14:- ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಕೋವಿಡ್ ಕಾರಣ ಹೇಳಿ ಯಾವುದೇ ಪ್ರಯತ್ನ ಮಾಡಲಿಲ್ಲ. ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು 2 ವರ್ಷ ಕಳೆದರೂ ಒಳ ಮೀಸಲಾತಿ ಹೆಸರಿನಲ್ಲಿ ಯಾವುದೇ ನೇಮಕಾತಿ ಮಾಡಿಲ್ಲ. ಇದರಿಂದ ಯುವಜನತೆಯ ನಿರೀಕ್ಷೆ ಹುಸಿಯಾಗಿದೆ ಎಂದು ಕಿಡಿ ಕಾರಿದರು.
2025-26ನೇ ಸಾಲಿಗೆ ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಕಿಂಚಿತ್ತು ಪ್ರಯತ್ನ ನಡೆಯುತ್ತಿಲ್ಲ. ಕೆಲ ಕುಂಟುನೆಪ ಹೇಳುತ್ತಾ ನೇಮಕಾತಿ ಮುಂದೂಡಲಾಗುತ್ತಿದೆ. ರಾಜ್ಯದ ಎಲ್ಲೆಡೆ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರು ಸರ್ಕಾರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬಹುದೆಂದು ಹಲವಾರು ವರ್ಷಗಳಿಂದ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ.
4-5 ವರ್ಷಗಳಿಂದ ನೇಮಕಾತಿಗಳೇ ನಡೆಯದಿರುವುದರಿಂದ ಅದೆಷ್ಟೋ ಯುವಜನರು ತಮ್ಮ ಅರ್ಹತಾ ವಯಸ್ಸನ್ನು ಮೀರಿದ್ದಾರೆ. ಉದ್ಯೋಗದ ಭರವಸೆಯಿಲ್ಲದೆ ಯುವಜನರು ಆತ್ಮಹತ್ಯೆಯಂತಹ ಕಠಿಣ, ನೋವಿನ ನಿರ್ಧಾರಕ್ಕೆ ಮೊರೆಹೋಗುತ್ತಿದ್ದಾರೆ. ಇನ್ನೊಂದೆಡೆ ಕೆಪಿಎಸ್‍ಸಿಯ ಅಧ್ಯಕ್ಷರು, ಸದಸ್ಯರ ಒಳಜಗಳ ಮತ್ತು ಅದರಲ್ಲಿನ ಭ್ರಷ್ಟಾಚಾರ ನೇಮಕಾತಿಗಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಬೇಸರ ತರಿಸಿದೆ ಎಂದು ಅಸಮಾಧಾನ ಹೊರಹಾಕಿದರು.
ಹಕ್ಕೊತ್ತಾಯಗಳು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡಬೇಕು. ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಿ, ಪಾರದರ್ಶಕತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸರಿಯಾಗಿ ನೇಮಕಾತಿಗಳು ನಡೆಯದ ಹಿನ್ನೆಲೆಯಲ್ಲಿ ಎಲ್ಲಾ ನೇಮಕಾತಿಗಳಿಗೆ ಅರ್ಹ ವಯೋಮಿತಿಯನ್ನು ಕನಿಷ್ಠ ಐದು ವರ್ಷಗಳ ಸಡಿಲಿಕೆ ಮಾಡಬೇಕು. ಪೆÇಲೀಸ್ ಕಾನ್ಸ್‍ಟೆಬಲ್ ವಯೋಮಿತಿಯನ್ನು ಸಾಮಾನ್ಯ ವರ್ಗ 30, ಎಸ್.ಸಿ, ಎಸ್.ಟಿ, ಒಬಿಸಿ ವರ್ಗಕ್ಕೆ 33 ವರ್ಷಗಳಿಗೆ ಹೆಚ್ಚಿಸಬೇಕು. ಸರ್ಕಾರಿ ಇಲಾಖೆಗಳಲ್ಲಿ ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ಕೈ ಬಿಟ್ಟು ಎಲ್ಲಾ ಹುದ್ದೆಗಳನ್ನು ಕಾಯಂ ಆಧಾರದಲ್ಲಿ ನೇಮಕಾತಿ ಮಾಡಬೇಕು. ಇತ್ತೀಚೆಗೆ ಕೆಇಎ ಹೊರಡಿಸಿರುವ ನೋಟಿಫಿಕೇಶನ್‍ನಲ್ಲಿ ನಿಗದಿಪಡಿಸಿರುವ ದುಬಾರಿ ಅರ್ಜಿ ಶುಲ್ಕ ಕೈ ಬಿಡಬೇಕೆಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ನೀತುಶ್ರೀ, ಸಹ ಸಂಚಾಲಕರಾದ ಆದರ್ಶ್, ರಕ್ಷಿತ್, ಗಿರೀಶ್, ಸುನಿಲ್.ಟಿ.ಆರ್, ಸುಮ.ಎಸ್, ರಣಜಿತ್, ಪೂರ್ಣಿಮಾ, ಅನಿಲ್, ಸಿಂಚನ, ಪೃಥ್ವಿ, ರಜತ್, ಅನುಷ, ನಂಜುಂಡ ಭಾಗವಹಿಸಿದ್ದರು.




























