
ಕೆಂಗೇರಿ,ನ.೧೧:ಬಾಲ್ಯದಲ್ಲಿಯೇ ಮಕ್ಕಳಿಗೆ ಕ್ರೀಡೆಯಲ್ಲಿ ತೊಡಿಸಿಕೊಳ್ಳುವ ವಾತಾವರಣ ನಿರ್ಮಾಣ ಮಾಡುವ ಮೂಲಕ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡಬೇಕೆಂದು ಅಂತರಾಷ್ಟ್ರೀಯ ಫೆನ್ಸಿಂಗ್ ಕ್ರೀಡಾಪಟು ಹೆಚ್. ರಾಜೇಂದ್ರ ಸಿಂಗ್ ಕರೆ ನೀಡಿದರು.
ಮಾಗಡಿ ಮುಖ್ಯ ರಸ್ತೆಯ ಎಂಬೆಸ್ಸಿ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಕ್ರೀಡಾಪಟುಗಳು ಶಿಸ್ತು, ಸಮಯ ಪ್ರಜ್ಞೆ ತಾಳ್ಮೆಯನ್ನು ರೂಡಿಸಿಕೊಂಡು ಕ್ರೀಡೆಯಲ್ಲಿ ತೊಡಗಿಸಿಕೊಂಡು ಕೌಶಲ್ಯಗಳನ್ನು ಕರಗತ ಮಾಡಿಕೊಂಡಾಗ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಬಹುದಾಗಿದೆ ಎಂದು ತಿಳಿಸಿದರು.
ಒಂದೇ ದಿನದಲ್ಲಿ ಉತ್ತಮ ಕ್ರೀಡಪಟುವಾಗಲು ಸಾಧ್ಯವಿಲ್ಲ ಸತತ ಪರಿಶ್ರಮ, ನಿರಂತರ ಕಠಿಣ ಅಭ್ಯಾಸವನ್ನು ರೂಡಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.ರಾಜ್ಯ,,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲಿ ಆಟಗಾರನಾಗಿ ಹೆಸರು ಗಳಿಸಿದರೂ ಆಟಗಾರನಾಗಿ ಎತ್ತರಕ್ಕೆ ಏರಲು ಸಹಕರಿಸಿ, ಪ್ರೋತ್ಸಾಹಿಸಿದ ಗುರು ಹಿರಿಯರನ್ನ. ಮತ್ತು ಪೋಷಕರನ್ನ ಸ್ಮರಿಸಿ ಗೌರವಿಸಿದಾಗ ಮಾತ್ರ ಆಟಗಾರನ ವ್ಯಕ್ತಿತ್ವ, ಘನತೆ ಹೆಚ್ಚುತ್ತದೆ ಎಂದರು.
ಶಿಕ್ಷಣ ತಜ್ಞ ವೆಂಕಟೇಶ್. ಬಿ. ವಿ ಮಾತನಾಡಿ ಪಠ್ಯದೊಂದಿಗೆ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾ ಮನೋಭಾವವನ್ನು ರೂಡಿಸಿಕೊಳ್ಳಬೇಕೆಂದರು. ಏಷಿಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಲಕ್ಷ್ಯ ರಾಜೇಶ್ ಮಾತನಾಡಿ ಕ್ರೀಡೆ ಮನುಷ್ಯನ ಸರ್ವಾಂಗೀಣ ಬೆಳ ವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರಲ್ಲದೆ ಬಾಲ್ಯದಲ್ಲಿ ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕ ಸಮತೋಲನತೆ ಹಾಗೂ ಉತ್ತಮ ಆರೋಗ್ಯ ವನ್ನು ಹೊಂದಬಹುದಾಗಿದೆ ಎಂದರು.
ಆಡಳಿತ ಮಂಡಳಿಯ ಮುಖ್ಯಸ್ಥೆ ಸವಿತ. ಕೆ ಮಾತನಾಡಿ ಬಾಲ್ಯದಲ್ಲಿ ಮಕ್ಕಳು ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು ಉತ್ತಮ ಕ್ರೀಡಾಪಟುವಾಗಿ ಹೊರ ಹೊಮ್ಮಲು ಶಾಲಾ ಆವರಣದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಉತ್ತಮ ಕ್ರೀಡಾಪಟುಗಳಾಗಿ ಸಾಧನೆ ಮಾಡಲು ಎಲ್ಲ ರೀತಿಯ ಸಹಕಾರ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಪ್ರಾಂಶುಪಾಲೆ ಡಾ.ಜಯಶ್ರೀ. ಜಿ, ಸ್ಪೋರ್ಟ್ ಕ್ಯಾಪ್ಟನ್ ಭುವನ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ಹಾಗೂ ಪದಕಗಳನ್ನು ನೀಡಲಾಯಿತು.

























