
ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕಿನ ವತಿಯಿಂದ ಸ್ವ-ಉದ್ಯೋಗ ನಡೆಸುತ್ತಿರುವ ಹಾಗೂ ಆರಂಭಿಸಲು ಉತ್ಸುಕರಾದ ಪಾಲುದಾರ ಬಂಧುಗಳಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಪುತ್ತೂರು ಯೋಜನಾ ಕಛೇರಿ ಸಬಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಮಾತನಾಡಿ, ಧರ್ಮಸ್ಥಳದ ಡಾ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ನೂರಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ವ್ಯಕ್ತಿಯ ಸ್ವಾವಲಂಬಿ ಬದುಕಿಗೆ ಪೂರಕವಾಗಿ ವಿವಿಧ ತರಬೇತಿಗಳನ್ನು ನೀಡುವ ಮೂಲಕ ಸ್ವ-ಉದ್ಯೋಗಕ್ಕೆ ಪ್ರೇರಣೆ ನೀಡಲಾಗುತ್ತಿದೆ ಎಂದು ಹೇಳಿದರು.
ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ತರಬೇತಿಯನ್ನು ನೀಡಿ, ಸ್ವಂತ ಉದ್ಯೋಗವನ್ನು ಯಶಸ್ವಿಯಾಗಿ ಮುಂದುವರೆಸುವ ಕುರಿತು ಹಾಗೂ ಈಗಾಗಲೇ ಸ್ವ-ಉದ್ಯೋಗದಲ್ಲಿ ತೊಡಗಿರುವ ಸದಸ್ಯರೊಂದಿಗೆ ವಿಚಾರ ವಿನಿಮಯ ನಡೆಸಿದರು. ಸ್ವ-ಉದ್ಯೋಗ ಎಂದರೆ ಕೇವಲ ವ್ಯಾಪಾರ ಮಾಡುವುದಲ್ಲ, ಪ್ರತಿದಿನ ಲಾಭ-ನಷ್ಟದ ಲೆಕ್ಕಾಚಾರವನ್ನು ಸರಿಯಾಗಿ ನಿರ್ವಹಿಸುವವನೇ ನಿಜವಾದ ಲಾಭ ಪಡೆಯಲು ಸಾಧ್ಯ ಎಂದು ಅವರು ಹೇಳಿದರು.
ಕೇಂದ್ರ ಕಚೇರಿಯ ಸಿಡ್ಬಿ ವಿಭಾಗದ ಯೋಜನಾಧಿಕಾರಿ ಅನುಷಾ ರೈ ಅವರು ಸಿಡ್ಬಿ ಪ್ರಯಾಸ್ ಯೋಜನೆಯ ಕುರಿತು ಮಾಹಿತಿ ನೀಡಿ, ಯೋಜನೆ ಪಡೆಯಲು ಅಗತ್ಯವಿರುವ ದಾಖಲಾತಿಗಳ ಬಗ್ಗೆ ತಿಳಿಸಿದರು. ಸಿಡ್ಬಿ ಸಾಲ ಪಡೆದು ಯಶಸ್ವಿ ಉದ್ಯಮಿಯಾಗಿರುವ ಬಪ್ಪಳಿಗೆ ಗ್ರಾಮದ ಸಾಹಿರಾ ಬಾನು ಅವರು ತಮ್ಮ ಅನುಭವವನ್ನು ಹಂಚಿಕೊಂಡು ಭಾಗವಹಿಸಿದ ಸದಸ್ಯರಿಗೆ ಪ್ರೇರಣೆಯ ಮಾತುಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ., ಜ್ಞಾನವಿಕಾಸ ಸಮನ್ವಯಾಧಿಕಾರಿ, ಆಡಳಿತ ಸಹಾಯಕ ಪ್ರಬಂಧಕರು ಉಪಸ್ಥಿತರಿದ್ದರು. ರಬೇತಿ ಕಾರ್ಯಾಗಾರದಲ್ಲಿ ಒಟ್ಟು ೪೭ ಮಂದಿ ಸದಸ್ಯರು ಭಾಗವಹಿಸಿದ್ದರು.




























