ಕೋಳೂರು: ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ನೂತನ ಕಟ್ಟಡ ಉದ್ಘಾಟನೆ


ಬಳ್ಳಾರಿ,ಜೂ,1- ಕುರುಗೋಡು ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವನ್ನು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಚಿಕಿತ್ಸಾಲಯದ ಸೇವೆಗಳನ್ನು ಸಮರ್ಪಕವಾಗಿ ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರತಿ ಖಾಯಿಲೆಗೂ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಉತ್ತಮವಾದ ಚಿಕಿತ್ಸೆ ಉಚಿತವಾಗಿ ಲಭ್ಯವಿದ್ದು, ಸಾರ್ವಜನಿಕರು ಚಿಕಿತ್ಸಾಲಯದ ಸೇವೆಯನ್ನು ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಳೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ದೊಡ್ಡಬಸಮ್ಮ, ಉಪಾಧ್ಯಕ್ಷ ಚೆನ್ನಪ್ಪ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಂ.ವಿರುಪಾಕ್ಷ, ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಕೆ.ಪಿ.ಕಲ್ಯಾಣಿ ಸೇರಿದಂತೆ ಕೋಳೂರು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಗ್ರಾಮದ ಮುಖಂಡರು, ಸಾರ್ವಜನಿಕರು ಮತ್ತು ಚಿಕಿತ್ಸಾಲಯದ ಸಿಬ್ಬಂದಿ ವರ್ಗ ಇದ್ದರು.