ಕೋಳೂರು ಪಾರ್ವತಮ್ಮ ನಿಧನ ನಾಳೆ ಅಂತ್ಯಕ್ರಿಯೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.17
: ನಗರದ ಗಣಿ ಉದ್ಯಮಿಗಳಾಗಿದ್ದ ಕೆ.ಎಂ.ಪಾರ್ವತಮ್ಮ ಅವರು ಇಂದು ಬೆಳಿಗ್ಗೆ 7.30 ರ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ.
ವೀರಶೈವ ಲಿಂಗಾಯತ ಸಮಾಜದಲ್ಲಿ ಕೊಡುಗೈ ದಾನಿಗಳಾಗಿದ್ದ ಇವರಿಗೆ 86 ವರ್ಷವಾಗಿತ್ತು. ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂದುಗಳು ಶಿಷ್ಯ ಸಮೂಹವನ್ನು ಅಗಲಿದ್ದಾರೆ.
ಇವರ ಪಾರ್ಥೀವ ಶರೀರ ಇಂದು ರಾತ್ರಿ 7 ಗಂಟೆಯ ನಂತರ ಇಲ್ಲಿನ ಪಾರ್ವತಿ ನಗರದ ಎರಡನೇ ಲಿಂಕ್ ರೋಡ್ ನಲ್ಲಿರುವ ಅವರ ನಿವಾಸಕ್ಕೆ ಆಗಮಿಸಲಿದ್ದು. ನಾಳೆ ಮಧ್ಯಾಹ್ನ 1 ಗಂಟೆ ವರೆಗೆ ಇಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಿದೆ. ನಂತರ ಅವರ ಸ್ವಂತ ಊರು ಕುರುಗೋಡು ತಾಲೂಕಿನ‌ ಕೋಳೂರು ಗ್ರಾಮದಲ್ಲಿನ ಜಮೀನನಲ್ಲಿ ಅಂತ್ಯಕ್ರಿಯೆ ನಡೆಯಲಿದೆಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ:
ನಗರದ ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ‌ ಒಕ್ಕೂಟ, ಕಮ್ಮರಚೇಡು ಮಠದ ಕಲ್ಯಾಣ ಶ್ರೀಗಳು, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದರಾಮ ಕಲ್ಮಠ, ಮಾಜಿ ಅಧ್ಯಕ್ಷ ಕೆ.ಎಂ. ಸಿದ್ದಲಿಂಗಪ್ಪ ಮೊದಲಾದವರು ತೀವ್ರ ಸಂತಾಪ ವ್ಯಕ್ತಪಡಿಸಿ ಪಾರ್ವತಮ್ಮ ಹಾಗು ಅವರ ಕುಟುಂಬದ ದಾನ ಗುಣವನ್ನು ಸ್ಮರಿಸಿದ್ದಾರೆ‌