
ಪುತ್ತೂರು; ಸಾಂಪ್ರದಾಯಿಕ ಆಚರಣೆಯಾಗಿ ಜಿಲ್ಲೆಯಲ್ಲಿ ಬೆಳೆದು ಬಂದ ಜೂಜು ರಹಿತ ಕೋಳಿ ಅಂಕದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಇದೀಗ ನ್ಯಾಯಾಲಯದ ಮೊರೆ ಹೋಗಲು ಸಾಂಪ್ರದಾಯಿಕ ಆಚರಣೆಗಳ ಹಿತರಕ್ಷಣಾ ಸಮಿತಿ ತೀರ್ಮಾನ ಮಾಡಿದೆ.
ಪುತ್ತೂರಿನ ಕೊಟೇಚಾ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲೆಯ ಜಾನಪದ ವೀರಕ್ರೀಡೆಯಾಗಿರುವ ಕಂಬಳದಂತೆ ಜಾನಪದ ಶೈಲಿಯಲ್ಲಿಯೇ ಆಚರಣೆಯಾಗುತ್ತಿರುವ ಬಂದಿರುವ ರೈತಾಪಿ ವರ್ಗದ ಕೋಳಿಅಂಕಕ್ಕೂ ಸಾಮಾಜಿಕವಾದ ಮನ್ನಣೆ ಸಿಗಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯದ ಮೆಟ್ಟಲು ಹತ್ತಲು ಸಮಿತಿ ನಿರ್ಧರಿಸಿದೆ. ಕಳೆದ ಎರಡು ವರ್ಷಗಳಿಂದ ಪೊಲೀಸರು ದೇವಳದ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವದ ಸಂದರ್ಭದಲ್ಲಿ ನಡೆಸುತ್ತಿರುವ ಜೂಜುರಹಿತ ಕೋಳಿಅಂಕಕ್ಕೆ ದಾಳಿ ಮಾಡುತ್ತಿದ್ದಾರೆ. ಇದರಿಂದ ಪ್ರಚೀನ ಕಾಲದಿಂದಲೂ ಧಾರ್ಮಿಕ ನೆಲೆಯಲ್ಲಿ ನಡೆಯುತ್ತಿರುವ ಕೋಳಿಅಂಕಗಳು ನಡೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ಇದೀಗ ಸಾಂಪ್ರದಾಯಿಕ ಆಚರಣೆಗಳ ಹಿತರಕ್ಷಣಾ ಸಮಿತಿ ರಚನೆಯಾಗಿದೆ.
ಕೋಳಿ ಸಹಿತ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಈಗಾಗಲೇ ಕೋಳಿಅಂಕ ಪ್ರೀಯರು ಹಾಗೂ ಜನಪ್ರತಿನಿಧಿಗಳ ಭಾರೀ ವಿರೋಧಕ್ಕೆ ಒಳಗಾಗಿರುವ ಪೊಲೀಸರ ನಡೆಯ ವಿರುದ್ಧ ಹಿತರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೊದಲ ಹಂತವಾಗಿ ಮುತ್ತಿಗೆ ಹಾಕಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಕೋಳಿಅಂಕ ಪ್ರಿಯರು ಇದರಲ್ಲಿ ಭಾಗಿಯಾಗಲಿದ್ದಾರೆ. ಈ ಧರಣಿಯ ವೇಳೆ ಕೋಳಿಗಳ ಸಹಿತ ಭಾಗವಹಿಸುವಂತೆ ಹಿತರಕ್ಷಣಾ ಸಮಿತಿ ವಿನಂತಿ ಮಾಡಿದೆ. ಫೆಬ್ರವರಿ ತಿಂಗಳಲ್ಲಿ ಈ ಧರಣಿ ನಡೆಸಲು ಮುಂದಾಗಿರುವ ಸಮಿತಿ ಮುಂದಿನ ಹಂತದಲ್ಲಿ ನ್ಯಾಯಾಲಯದ ಮೆಟ್ಟಲು ಏರಲು ನಿರ್ಣಯಿಸಿದೆ.
ಶಾಸಕರಿಂದ ಕೋರ್ಟ್ ವೆಚ್ಚ
ಕೇಪುನಲ್ಲಿ ನಡೆಯುತ್ತಿರುವ ಕೋಳಿಅಂಕಕ್ಕೆ ಪೊಲೀಸರು ಧಾಳಿ ನಡೆಸಿದ ತಕ್ಷಣ ಅಲ್ಲಿಗೆ ತೆರಳಿ ಕೋಳಿಅಂಕವನ್ನು ನಡೆಸಲು ಪ್ರೇರೇಪಣೆ ನೀಡಿದ ಪುತ್ತೂರು ಶಾಸಕ ಅಶೋಕ್ ರೈ ಅವರು ಹಿತರಕ್ಷಣಾ ಸಮಿತಿಯ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಹಿತರಕ್ಷಣಾ ಸಮಿತಿ ನ್ಯಾಯಾಲಯಕ್ಕೆ ಹೋಗಲು ಬೇಕಾದ ಎಲ್ಲಾ ಖರ್ಚು ವೆಚ್ಚಗಳನ್ನು ತಾನು ಭರಿಸುವುದಾಗಿ ವಾಗ್ದಾನ ಮಾಡಿದ ಅವರು ಮಾತನಾಡಿ, ದಕ ಜಿಲ್ಲೆಯ ೧೩ ಶಾಸಕರ ಮನೆಯ ಬಾಗಿಲು ಬಡಿದು ಜೂಜುರಹಿತ ಕೋಳಿಅಂಕದ ಹೋರಾಟಕ್ಕೆ ಬನ್ನಿ ಎಂದು ಕರೆಯಿರಿ. ಹಿಂದುತ್ವ ಎಂದು ಹೇಳಿಕೊಂಡು ಭಾಷಣ ಮಾಡುವವರು ಕೋಳಿಅಂಕದ ಬಗ್ಗೆ ಮೌನ ಮುರಿಯುತ್ತಿಲ್ಲ. ಜೂಜು ರಹಿತ ಕೋಳಿಅಂಕಕ್ಕೆ ಮಾತ್ರ ನನ್ನ ಬೆಂಬಲ. ಪಕ್ಷಾತೀತ ರೀತಿಯಲ್ಲಿ ನಿಮ್ಮ ಹೋರಾಟ ಪುತ್ತೂರಿನಿಂದಲೇ ಆರಂಭವಾಗಲಿ. ನಿಮ್ಮ ಜತೆಗೆ ನಾನಿದ್ದೇನೆ. ವಿಧಾನಸಭೆಯಲ್ಲೂ ಕೋಳಿಅಂಕಕ್ಕಾಗಿ ೧೩ ಮಂದಿ ಶಾಸಕು ಒಂದಾಗಿ ಮುಖ್ಯಮಂತ್ರಿ ಅವರನ್ನು ಆಗ್ರಹಿಸುವ ಕೆಲಸ ಮಾಡುತ್ತೇವೆ ಎಂದರು. ತುಳುನಾಡಿನ ಕಂಬಳಕ್ಕೆ ನ್ಯಾಯಾಲಯದಿಂದ ನ್ಯಾಯ ದೊರಕಿದಂತೆ ಕೋಳಿಅಂಕಕ್ಕೂ ಬಂದ ಕಂಟಕವೂ ನ್ಯಾಯಾಲಯದಿಂದ ದೂರವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಕೋಳಿಅಂಕಪ್ರಿಯರು.
ಸಮಾಲೋಚನಾ ಸಭೆಯ ವೇದಿಕೆಯಲ್ಲಿ ಹಿರಿಯರಾದ ಬಟ್ಯಪ್ಪ ಪೂಜಾರಿ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹಿತರಕ್ಷಣಾ ಸಮಿತಿ ಸಂಚಾಲಕ ಬೆಳಿಯಪ್ಪ ಗೌಡ, ಜಿಪಂ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ಮತ್ತಿತರರು ಭಾಗವಹಿಸಿದ್ದರು. ಕೋಳಿಅಂಕದ ಪರ ಸಾವಿರಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಬಾಗವಹಿಸಿದ್ದರು.



























