ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.18- ಕೋರಾನಾ ಸಂದರ್ಭದಲ್ಲಿ ಅಕ್ಸಿಜನ್ ಕೊರತೆಯಿಂದ ಮೃತಪಟ್ಟ ಎಲ್ಲಾ 36 ಮಂದಿ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ದೊರೆಯಬೇಕು. ಈ ನಿಟ್ಟಿನಲ್ಲಿ ನಾನು ಸಹ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ಮಾಡುವುದಾಗಿ ಕೊಳ್ಳೇಗಾಲದ ಶಾಸಕ ಎ.ಆರ್. ಕೃಷ್ಣಮುರ್ತಿ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಕೋರಾನಾ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರು ನಗರಸಭಾ ಸದಸ್ಯರಾದ ಅಬ್ರಾರ್ ಅಹಮದ್, ಮಹೇಶ್, ದಲಿತ ಮುಖಂಡ ಪಿ. ಸಂಘಸೇನಾ ನೇತೃತ್ವದಲ್ಲಿ ಶಾಸಕರನ್ನು ಭೇಟಿ ಮಾಡಿ ಅಭಿನಂದಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ನಮ್ಮ ನಾಯಕರಾದ ರಾಹುಲ್‍ಗಾಂಧಿ ಅವರ ಒತ್ತಾಸೆ ಹಾಗು ಸೂಚನೆಯ ಮೇರೆಗೆ ನಮ್ಮ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿU ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ವಿಚಾರವನ್ನು ಮಂಡಿಸಿ, ಸರ್ಕಾರಿ ಉದ್ಯೋಗ ನೀಡುವುದಕ್ಕೆ ಒಪ್ಪಿಗೆ ಪಡೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಗುಂಡ್ಲುಪೇಟೆ ಬಳಿ ಕೋರಾನಾ ಅಕ್ಸಿಜನ್ ದುರಂತದಲ್ಲಿ ಮೃತ ಪಟ್ಟ 36 ಮಂದಿ ಸಂತ್ರಸ್ತ ಕುಟುಂಬಗಳನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಅವರೊಂದಿಗೆ ಸಂವಾದ ನಡೆಸಿ ಹಾಗೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿಮ್ಮೆಲರಿಗೂ ಒಳ್ಳೆಯದಾಗುತ್ತದೆ ಮತ್ತು ಸರ್ಕಾರ ರಚನೆಯಾದ ಬಳಿಕ ಈ ಬಗ್ಗೆ ರಾಜ್ಯ ವರಿಷ್ಟರಿಗೆ ಸೂಚನೆ ನೀಡಿ, ಈ ಬೇಡಿಕೆಯನ್ನು ಈಡೇರಿಸುವಂತೆ ಸೂಚನೆ ಕೊಟ್ಟ ಫಲವಾಗಿ ನಿÀಮ್ಮೆಲ್ಲರಿಗೂ ಒಳ್ಳೆಯದಾಗಿದೆ ರಾಹುಲ್ ಗಾಂಧಿ ಅವರ ಕೊಡುಗೆ ಬಗ್ಗೆ ಕೃಷ್ಣಮುರ್ತಿ ತಿಳಿಸಿದರು.
ನಾನು ಜಿಲ್ಲೆಯ ಶಾಸಕನಾಗಿ ನನ್ನ ಕರ್ತವ್ಯ ಮಾಡಿದ್ದೇವೆ. ಆ ಸಂದರ್ಭದಲ್ಲಿ ನಮ್ಮ ಪಕ್ಷವು ನಿಮ್ಮೊಂದಿಗೆ ನಿಂತು ಹೋರಾಟ ಮಾಡಿತ್ತು. ಈಗ ಸರ್ಕಾರ ನಮ್ಮದಾಗಿದೆ. ಸರ್ಕಾರಕ್ಕೆ ಆರೋಗ್ಯ ಇಲಾಖೆ ನೀಡಿರುವ ವರದಿಯನ್ವಯ 21 ಮಂದಿಗೆ ಸರ್ಕಾರಿ ಉದ್ಯೋಗ ದೊರೆಯುತ್ತಿದೆ. ಇನ್ನು ಉಳಿದವರಿಗೂ ಸಹ ಸರ್ಕಾರಿ ಕೆಲಸ ಕೊಡಿಸಲು ಪ್ರಯತ್ನ ಮಾಡೋಣ. ಜಿಲ್ಲಾಧಿಕಾರಿಗಳಾದ ಶಿಲ್ಪನಾಗ್ ಅವರು ನಿಮ್ಮ ಪರವಾಗಿ ಶ್ರಮಿಸಿದ್ದಾರೆ. ಅವರೊಂದಿಗೆ ನಾನು ಸಹ ಸಮಾಲೋಚನೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಒಳ್ಳಯದಾಗುತ್ತದೆ. ನಿಮ್ಮನ್ನು ಬೆಂಬಲಿಸಿ ಹೋರಾಟ ಮಾಡಿದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿ ಎಂದು ಎ.ಆರ್ ಕೃಷ್ಣಮೂರ್ತಿ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಾಗರತ್ನ, ಸಿದ್ದರಾಜಮ್ಮ, ಮರಿಸ್ವಾಮಿ, ಶಿವಣ್ಣ, ನಂದಿನಿ, ಸುಶೀಲಾ, ಸವಿತಾ, ಸೇರಿದಂತೆ ಕೋರಾನಾ ಸಂತ್ರಸ್ತ ಕುಟುಂಬದ ಸದಸ್ಯರು ಹಾಗೂ ಮುಖಂಡರು ಇದ್ದರು.


























