ಕೋಮುಗಲಭೆ ನಿಗ್ರಹಕ್ಕೆ ವಿಶೇಷ ಕಾರ್‍ಯಪಡೆ ಸ್ಥಾಪನೆ

ಬೆಂಗಳೂರು, ಆ. ೧೨- ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಂತಿ ಸ್ಥಾಪನೆಯಾಗಬೇಕು. ಭಯ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂಬುದು ಎಲ್ಲರ ಆಶಯ. ಅದರಂತೆ ರಾಜ್ಯ ಸರ್ಕಾರ ಉಡುಪಿ, ಶಿವಮೊಗ್ಗ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಕೋಮು ಗಲಭೆಗಳನ್ನು ನಿಗ್ರಹಿಸಲು ಹೊಸದಾಗಿ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಧಾನಸಭೆಯಲ್ಲಿಂದು ಹೇಳಿದರು.


ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ೧೦-೧೫ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಂಪು ಘರ್ಷಣೆಗಳಾಗಿವೆ, ಕೊಲೆಗಳಾಗಿವೆ. ಇವುಗಳಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಜತೆಗೆ ಶಾಲೆಗಳಲ್ಲೂ ಮಕ್ಕಳಿಗೆ ವ್ಯಾಸಂಗದ ಪರಿಸರವೂ ಹಾಳಾಗಿದೆ. ಈ ಎಲ್ಲ ಕಾರಣಕ್ಕೆ ಅಲ್ಲಿನ ಜನ ಆತಂಕಗೊಂಡಿದ್ದಾರೆ. ತಮ್ಮ ಮಕ್ಕಳನ್ನು ವ್ಯಾಸಂಗಕ್ಕಾಗಿ ಬೆಂಗಳೂರು ಸೇರಿದಂತೆ ಬೇರೆ ಕಡೆಗಳಿಗೆ ಕಳುಹಿಸುತ್ತಿದ್ದಾರೆ. ಎಲ್ಲರಿಗೂ ಅಲ್ಲಿ ಶಾಂತಿ ಬೇಕಾಗಿದೆ. ಭಯ ಮುಕ್ತ ವಾತಾವರಣ ನಿರ್ಮಾಣವಾಗಬೇಕಾಗಿದೆ ಎಂದು ಅವರು ತಿಳಿಸಿದರು.


ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾನು ಅಲ್ಲಿನ ಉದ್ಯಮಿಗಳು, ಶಿಕ್ಷಣ ತಜ್ಞರು, ವಕೀಲರು, ವೈದ್ಯರು, ಮಾಧ್ಯಮ ಸ್ನೇಹಿತರು ಹೀಗೆ ಎಲ್ಲ ವರ್ಗದ ಜನರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಿದ್ದೇನೆ. ಎಲ್ಲರಿಗೂ ಪರಿಸರ ಹಾಳಾಗಿರುವ ಬಗ್ಗೆ ಹಾಗೂ ಭಯದ ವಾತಾವರಣ ನಿರ್ಮಾಣವಾಗಿರುವ ಬಗ್ಗೆ ಆತಂಕ ಇದೆ. ಈ ಆತಂಕವನ್ನು ನಿವಾರಿಸಿ, ಒಳ್ಳೆಯ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶ. ಹಾಗಾಗಿಯೇ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಲಾಗಿದೆ. ಈ ಕಾರ್ಯಪಡೆ ಸ್ಥಾಪನೆಯಾದ ನಂತರ ಅಲ್ಲಿ ಯಾವುದೇ ಗಲಭೆಗಳು ಆಗಿಲ್ಲ ಎಂದರು.


ನಾನು ಮಂಗಳೂರಿನಲ್ಲಿ ಶಾಂತಿ ಸಭೆ ಸಹ ನಡೆಸಿದ್ದೆ. ಶಾಂತಿ ಸಭೆಯಲ್ಲಿ ಎಲ್ಲ ಶಾಸಕರುಗಳು ಭಾಗವಹಿಸಿದ್ದರು. ಎಲ್ಲರೂ ಅಲ್ಲಿನ ವಾತಾವರಣ ಸರಿ ಹೋಗಬೇಕು, ಇಲ್ಲದಿದ್ದರೆ ಬಂಡವಾಳ ಬರಲ್ಲ, ಪ್ರವಾಸೋದ್ಯಮ ಅಭಿವೃದ್ಧಿಯಾಗಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮಂಗಳೂರಿನಲ್ಲಿ ಶಾಂತಿ ಸ್ಥಾಪನೆಗಾಗಿ ಭಯ ಮುಕ್ತ ವಾತಾವರಣಕ್ಕೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದರು.


ಮಂಗಳೂರು ಜನ ಬಹಳ ಒಳ್ಳೆಯ ಜನ. ಮಂಗಳೂರು ರಾಜ್ಯಕ್ಕೆ ಕಿರೀಟಪ್ರಾಯ ಜಿಲ್ಲೆ. ಬೆಂಗಳೂರು ನಂತರ ಹೆಚ್ಚಿನ ಆರ್ಥಿಕತೆ ನಡೆಯುವ ಜಿಲ್ಲೆಯಾಗಿದೆ. ಹಾಗಾಗಿ ಎಲ್ಲ ಮನಸ್ಸುಗಳು ಒಂದಾಗಬೇಕು ಎಂಬ ಪ್ರಯತ್ನವನ್ನು ನಾವು ನಡೆಸಿದ್ದೇವೆ. ಎಲ್ಲ ಶಾಸಕರ ಸಹಕಾರ ಇದಕ್ಕೆ ಮುಖ್ಯ ಎಂದು ಸಚಿವ ಡಾ. ಜಿ. ಪರಮೇಶ್ವರ್ ತಮ್ಮ ಸುದೀರ್ಘ ಉತ್ತರದ ಸಮಯದಲ್ಲಿ ಹೇಳಿದರು.


ಕೋಮು ಗಲಭೆ ತಡೆಯಲು ಸ್ಥಾಪಿಸಲಾಗಿರುವ ವಿಶೇಷ ಪಡೆ ಯಾರದೋ ಮನೆಗೆ ಮಧ್ಯರಾತ್ರಿ ಭೇಟಿ ನೀಡಿ .ಅವರಿಗೆ ತೊಂದರೆ ಕೊಡಲ್ಲ. ಈ ರೀತಿಯ ಹೇಳಿಕೆಗಳು ಸರಿಯಲ್ಲ ಎಂದು ಹೇಳಿದರು.


ಗಡಿ ಭಾಗದಲ್ಲಿ ನಿತ್ಯವೂ ಬಂದು ಹೋಗುವವರ ತಪಾಸಣೆಯನ್ನು ಮಾಡುತ್ತಿದ್ದೇವೆ. ಅಪರಾಧ ತಡೆಗೆ ಗುಡ್‌ಮಾರ್ನಿಂಗ್, ರಾತ್ರಿ ಬೀಟ್‌ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಜಾನುವಾರುಗಳ ಕಳ್ಳರ ಮೇಲೆ ಭದ್ರತಾ ಕಾಯ್ದೆಗಳನ್ನು ಹಾಕಲಾಗುತ್ತಿದೆ. ವಿಶೇಷ ಪಡೆಯಿಂದ ಯಾವುದೇ ರೀತಿಯ ರಾತ್ರಿ ರೌಂಡ್ಸ್ ಇರುವುದಿಲ್ಲ ಹಾಗೂ ವಿನಾ ಕಾರಣ ಸಾರ್ವಜನಿಕರಿಗೆ ಯಾವುದೇ ಕಿರುಕುಳ ನೀಡಿರುವುದಿಲ್ಲ. ಈ ಕುರಿತು ವಿಶೇಷ ಕಾರ್ಯಪಡೆಯ ಬಗ್ಗೆ ಯಾವುದೇ ದೂರುಗಳು ಬಂದಿರುವುದಿಲ್ಲ ಎಂದು ಅವರು ಹೇಳಿದರು.


ವಿಶೇಷ ಕಾರ್ಯಪಡೆ ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು ಮತ್ತು ಕೋಮು ಸಂಬಂಧಿತ ಘಟನೆಗಳಿಗಾಗಿ, ಮಾಧ್ಯಮಗಳನ್ನು ಬಳಸುವವರ ಮೇಲೆ ನಿಗಾ ಇಡುವುದು, ಸಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಗಾವಲು ಮತ್ತು ಮಾನವ ಗುಪ್ತಚರ ಮೂಲಕ ಎಚ್ಚರಿಕೆ ವ್ಯವಸ್ಥೆಯನ್ನು ರಚಿಸುವುದು, ಪ್ರಾಬಲ್ಯದ ಮೂಲಕ ವಿಶ್ವಾಸ ವೃದ್ಧಿ ಕ್ರಮಗಳನ್ನು ಕೈಗೊಳ್ಳುವುದು, ಮೂಲಭೂತೀಕರಣ ಗುರುತಿಸುವುದು ಮತ್ತು ಮೇಲ್ವಿಚಾರಣೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು, ಕಮಿನಲ್ ಸಂದರ್ಭದಲ್ಲಿ ವಿಶೇಷ ಕಾರ್ಯಪಡೆ ಅಧಿಕಾರಿ, ಸಿಬ್ಬಂದಿಗಳನ್ನು ನೇರವಾಗಿ ನಿಯಂತ್ರಿಸುವುದು ವಿಶೇಷ ಕಾರ್ಯಪಡೆಯ ಕಾರ್ಯಸೂಚಿಯಾಗಿದೆ ಎಂದು ಅವರು ಹೇಳಿದರು.


ಈ ಬಗ್ಗೆ ಹೆಚ್ಚಿನ ಚರ್ಚೆಗೆ ಪ್ರತಿಪಕ್ಷ ಸದಸ್ಯರುಗಳು ಮುಂದಾದಾಗ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ಬಗ್ಗೆ ಚರ್ಚಿಸಲು ಗೃಹ ಸಚಿವರು ಒಂದು ಸಭೆ ಕರೆಯಲಿ. ಆ ಸಭೆಗೆ ಆ ಭಾಗದ ಎಲ್ಲ ಶಾಸಕರನ್ನು ಆಹ್ವಾನಿಸಲಿ ಎಂದು ಹೇಳಿ, ಈ ಕುರಿತ ಸುದೀರ್ಘ ಪ್ರಶ್ನೆ, ಉತ್ತರಕ್ಕೆ ತೆರೆ ಎಳೆದರು.