
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.26: ತಾಲೂಕಿನ ಕೊಳಗಲ್ಲು ಗ್ರಾಮದ ಎರ್ರಿತಾತಾ ಮಠದ ಮುಖ್ಯಸ್ಥೆ ರತ್ನಮ್ಮವ್ವಳ ಅಂತ್ಯಕ್ರಿಯೆಯ ಸ್ಥಳದ ಬಗ್ಗೆ ವಿವಾದವಾಗಿದ್ದು. ಈ ಬಗ್ಗೆ ಗ್ರಾಮದಲ್ಲಿ ಬಿಗುವಿನ ವಾತಾವರಣ ಇದೆ. ಪೊಲೀಸ್ ಭದ್ರತೆ ಮಾಡಲಾಗಿದೆ. ಗ್ರಾಮದ ಮುಖಂಡರಲ್ಲಿನ ಭಿನ್ನಾಭಿಪ್ರಾಯ ನ್ಯಾಯಾಲಾಯದ ಈ ಹಿಂದಿನ ಆದೇಶ ಇದಕ್ಕೆ ಕಾರಣವಾಗಿದ್ದು ಈ ಕುರಿತು ಎಸ್ಪಿ ಜಿಲ್ಲಾಡಳಿತದ ಬಳಿ ಗ್ರಾಮದ ಮುಖಂಡರ ಚರ್ಚೆ ನಡೆದಿದೆ.
ರತ್ನಮ್ಮವ್ವ (65) ನಿನ್ನೆ ಸಂಜೆ ನಗರದ ಆಸ್ಪತ್ರೆಯಲ್ಲಿ ದೈವಾಧೀನರಾಗಿದ್ದಾರೆ. ನಂತರ ಅವರ ಪಾರ್ಥೀವ ಶರೀರವನ್ನು ಮಠಕ್ಕೆ ಕೊಂಡಯ್ಯಲಾಗಿದೆ. ಈ ಹಿಂದಿನವರಂತೆ ಇವರ ಅಂತ್ಯಕ್ರಿಯೆಯ ಸಮಾಧಿ ವಿಚಾರಕ್ಕೆ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ.
ಈ ಹಿಂದೆ ಈ ಮಠದ ವಿಷಯ ನ್ಯಾಯಾಲಯದ ಮೆಟ್ಟಿಲೇರಿದೆ. ಆಗ ನ್ಯಾಯಾಲಯ ಯತಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ.
ಇದರಿಂದಾಗಿ ಈಗ ರತ್ನಮ್ಮವ್ವಳ ಸಮಾಧಿ ವಿಷಯ ವಿವಾದಕ್ಕೆ ಎಡೆಯಾಗಿದೆ. ಗ್ರಾಮದ ಬಹುತೇಕ ಜನ ಮಠದಲ್ಲಿಯೇ ಅಂತ್ಯಕ್ರಿಯೆ ಆಗಲಿ ಎಂಬುದಾಗಿದೆ. ಆದರೆ ನ್ಯಾಯಾಲಯದ ಆದೇಶ ಇದಕ್ಕೆ ಅಡ್ಡ ಆಗುತ್ತದೆಂಬುದು ಕೆಲವರ ವಾದವಾಗಿದೆ.
ಈ ಹಿನ್ನಲೆಯಲ್ಲಿ ಕೊಳಗಲ್ಲಿನಲ್ಲಿ ಮೀಸಲು ಪೊಲೀಸ್ ಪಡೆಗಳನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಿದೆ. ಸ್ಥಳಕ್ಕೆ ಎಸ್ಪಿ ಶೋಭಾರಾಣಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಆಗ ಗ್ರಾಮಸ್ಥರು ಈ ವಿವಾದ ಬಗೆಹರಿಸುವಂತೆ ಕೋರಿದ್ದಾರೆ. ಆದರೆ ಎಸ್ಪಿ ಅವರು ಹೀಗೆ ಓಪನ್ ಆಗಿ ಸಭೆ ನಡೆಸಿದರೆ ಒಬ್ಬೊಬ್ಬರು ಒಂದು ಮಾತನಾಡುತ್ತಾರೆ. ಒಮ್ಮತಕ್ಕೆ ಬರುವುದು ಕಷ್ಟ. ಕಚೇರಿಗೆ ಮುಖಂಡರುಗಳು ಬನ್ನಿ ಚರ್ಚೆ ಮಾಡುವ ಎಂದು ಬಂದಿದ್ದರು. ಈ ವೇಳೆ ಎಸ್ಪಿ ಅವರು ಗ್ರಾಮದ ಮುಖಂಡರಿಗೆ ಕೋರ್ಚ್ ನ ಆದೇಶಕ್ಕೆ ಧಕ್ಕೆಯಾಗದಂತೆ ನೀವೆಲ್ಲಾ ಸೇರಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಿ ಎಂದು ಹೇಳಿ ಕಳುಹಿಸಿದ್ದಾರೆ. ಈಗ ಗ್ರಾಮಸ್ಥರಲ್ಲಿ ಒಂದು ಗುಂಪು ಯಾವುದೇ ಕಾರಣಕ್ಕೆ ನ್ಯಾಯಾಲಯದ ವಿವಾದವಿರುವುದರಿಂದ ದೇವಸ್ಥಾನದ ಆವರಣವನ್ನು ಬಿಟ್ಟು ಬೇರೆಕಡೆ ಅಂತ್ಯಕ್ರಿಯೆ ಮಾಡಲು ಸಮ್ಮತಿಸಿದೆ. ಮತ್ತೊಂದು ಗುಂಪು ದೇವಸ್ಥಾನದ ಮುಂಭಾಗದಲ್ಲಿರುವ ದೇವಸ್ಥಾನಕ್ಕೆ ಸಂಬಂಧಿಸಿದ ನಿವೇಶನದಲ್ಲಿ ಅಂತ್ಯಕ್ರಿಯೆ ಮಾಡುವ ಬಗ್ಗೆ ಚರ್ಚೆ ನಡೆಸಿದೆ. ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಮಠದ ಹಿನ್ನಲೆ:
ಕುರುಬ ಸಮುದಾಯದ ಎರಿತಾತನ ಮಠವಿದೆ. ಈ ಮಠಕ್ಕೆ ಭೂಮಿ ಕೊಟ್ಟವರು ಪರಿಶಿಷ್ಟ ಜಾತಿಗೆ ಸೇರಿದ ಜಡಿಯಪ್ಪನವರು.ಮಠದ ಎರಿತಾತ ಕಾಲವಾದ ಬಳಿಕ ಅವರನ್ನು ಮಠದಲ್ಲಿಯೇ ಸಮಾಧಿ ಮಾಡಲಾಗಿತ್ತು. ಜಮೀನು ನೀಡಿದ ಜಡಿಯಪ್ಪನವರು ಕಾಲವಾದಾಗಲೂ ಅವರನ್ನೂ ಮಠದಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿತ್ತು.
ಆ ಬಳಿಕ, ಜಡಿಯಪ್ಪನವರ ಪುತ್ರ ಎರೆಪ್ಪ ತಾತನವರು ಮಠದ ಎರಡನೇ ಪೀಠಾಧಿಪತಿಯಾಗಿದ್ದರು. ಎರೆಪ್ಪ ತಾತ ಕಾಲವಾದಾಗ ಅವರನ್ನು ಮೊದಲ ಪೀಠಾಧಿಪತಿ ಎರಿತಾತನವರ ಪಕ್ಕದಲ್ಲೇ ಸಮಾಧಿ ಮಾಡಲಾಗಿತ್ತು. ರತ್ನಮ್ಮವ್ವನವರು ಎರಡನೇ ಪೀಠಾಧಿಪತಿ ಎರೆಪ್ಪ ತಾತನವರ ಪತ್ನಿ ಇದೀಗ ದೈವಾಧೀನರಾಗಿದ್ದಾರೆ.
ಪತಿ ಎರೆಪ್ಪ ತಾತನವರ ಸಮಾಧಿ ಪಕ್ಕದಲ್ಲೇ ರತ್ನಮ್ಮವ್ವ ಅವರ ಸಮಾಧಿ ಮಾಡಬೇಕು ಎಂಬುದು ಒಂದು ಗುಂಪಿನ ವಾದ. ಆದರೆ, ಇದನ್ನು ಮತ್ತೊಂದು ಗುಂಪು ವಿರೋಧಿಸುತ್ತಿದೆ. ಮಠವನ್ನು ಹೊರತುಪಡಿಸಿ ಬೇರೆಲ್ಲಾದರೂ ಸಮಾಧಿ ಮಾಡಲಿ ಎಂಬ ಒತ್ತಾಯ ಕೇಳಿ ಬಂದಿದೆ.

























