
ಉಡುಪಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ನೇತೃತ್ವದಲ್ಲಿ ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗ ಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಕಳೆದ ೨೬ ದಿನಗಳಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಖ್ಯಮಂತ್ರಿ ಭರವಸೆ ಹಿನ್ನೆಲೆಯಲ್ಲಿ ಶುಕ್ರವಾರ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಅಧ್ಯಕ್ಷೆ ಸುಶೀಲಾ ನಾಡ ಈ ವಿಷಯವನ್ನು ಪ್ರಕಟಿಸಿದರು. ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಕುರಿತು ಕಾನೂನಾತ್ಮಕವಾಗಿ ಆದೇಶ ಹೊರಡಿಸಲು ಸಮಯಾವಕಾಶ ಕೇಳಿದ್ದು, ಅದರಂತೆ ಮೂರು ತಿಂಗಳೊಳಗೆ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸದಿದ್ದರೆ ಮತ್ತೆ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜ.೮ರಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಮುದಾಯದ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಬೇಡಿಕೆಯ ಮನವಿಯನ್ನು ಸಲ್ಲಿಸಿತು. ಮುಖ್ಯ ಮಂತ್ರಿಯವರು ಇದಕ್ಕೆ ಸಕರಾತ್ಮವಾಗಿ ಸ್ಪಂದಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಜರಿದ್ದರು. ಅದೇ ರೀತಿ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬುಡಕಟ್ಟು ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಎಂ.ಕನಗವಲ್ಲಿ, ಬುಡಕಟ್ಟು ನಿರ್ದೇಶಕ ಯೋಗೀಶ್ ಕೆ. ಅವರನ್ನು ಕೂಡ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗ ಸಮುದಾಯದ ೨೦೦೦ ಮಂದಿ ವಿದ್ಯಾವಂತ ಯವಜನರಿದ್ದು, ಇವರಿಗೆ ಸರಕಾರದ ಅಡಿಯಲ್ಲಿ ಬರುವ ವಿವಿಧ ಇಲಾಖೆಗಳಿಗೆ ನೇರನೇಮಕಾತಿ ಮೂಲಕ ಸರಕಾರಿ ಉದ್ಯೋಗ ನೀಡುವಂತೆ ಮುಖ್ಯಮಂತ್ರಿ ಸಹಿತ ಅಧಿಕಾರಿಗಳಿಗೆ ಮನವಿ ಮಾಡಿಕೊಡಲಾಯಿತು. ಇದಕ್ಕೆ ಅವರಿಂದ ಸೂಕ್ತ ಸ್ಪಂದನೆ ದೊರಕಿದ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನವೀನ್ ಬಂಟ್ವಾಳ, ಸಂಯೋಜಕ ಪುತ್ರನ್ ಹೆಬ್ರಿ, ಪ್ರಮುಖರಾದ ನಾಗು ನಾಡ, ಭಾರತಿ ಕಾಪು, ಶೀಲಾ ಬೆಳ್ಮಣ್, ಶೇಖರ್ ಕೆಂಜೂರು, ದಿನಕರ್ ಕಳ್ತೂರು, ಪ್ರೀತಿ ಹೆಬ್ರಿ, ಸುರೇಶ್ ಕಾಪು, ಸಂಜೀವ ಬಾರಕೂರು, ಅಮ್ಮಣ್ಣಿ ಚೋರಾಡಿ, ಪ್ರವೀಣ್ ಹೆಬ್ರಿ, ಕುಮಾರ್‌ದಾಸ್ ಹಾಲಾಡಿ ಉಪಸ್ಥಿತರಿದ್ದರು


























