
ಸುಳ್ಯದಲ್ಲಿ ಕೊರಗ ಸಮುದಾಯದ ಕುಂದು ಕೊರತೆ ಸಭೆ
ಸುಳ್ಯ:ಸುಳ್ಯ ತಾಲೂಕಿನಲ್ಲಿ ಕೊರಗ ಸಮುದಾಯಕ್ಕೆಂದು ಒಟ್ಟು ೪೧.೭೮ ಎಕ್ರೆ ಭೂಮಿ ಕಾದಿರಿಸಲಾಗಿದ್ದರೂ, ಆ ಜಮೀನು ಎಲ್ಲಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಅದನ್ನು ತಕ್ಷಣ ಗುರುತು ಮಾಡಿ ಕೊರಗ ಸಮುದಾಯದ ಕುಟುಂಬಗಳಿಗೆ ಕೃಷಿ ಮಾಡಲು ನೀಡಬೇಕು” ಎಂದು ಕೊರಗ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಸುಳ್ಯ ತಾಲೂಕು ಆಡಳಿತ, ತಾ.ಪಂ., ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮೂಲ ನಿವಾಸಿ ಕೊರಗ ಸಮುದಾಯದವರ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ತಾ.ಪಂ. ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಸುಂದರ ಎಂ. ನನಗೆ ಐ.ಟಿ.ಡಿ.ಪಿ. ಅಧಿಕಾರಿಗಳು ನೀಡಿದ ಮಾಹಿತಿಯಂತೆ ಅಮರಮುಡ್ನೂರು ಗ್ರಾಮದ ಒಂದು ಕಡೆ ೭ ಎಕರೆ, ಇನ್ನೊಂದು ಕಡೆ ೧.೧೮ ಎಕರೆ, ಕಳಂಜದಲ್ಲಿ ೧೦ ಎಕರೆ, ಎಣ್ಮೂರಿನಲ್ಲಿ ೪.೯ ಎಕರೆ, ಪೆರುವಾಜೆ ಗ್ರಾಮದಲ್ಲಿ ೪.೪ ಎಕರೆ ಹೀಗೆ ಒಟ್ಟು ೪೧. ೭೮ ಏಕರೆ ಜಾಗವನ್ನು ೨೦೦೭ ರಲ್ಲೇ ಕಾದಿರಿಸಲಾಗಿದೆ. ಕೊರಗರಿಗೆ ಕೃಷಿ ಮಾಡಲು ನೀಡುವ ಉದ್ದೇಶದಿಂದಲೇ ಇದನ್ನು ಮಾಡಲಾಗಿತ್ತು. ಆದರೆ ಆ ಜಾಗ ಎಲ್ಲಿದೆ ಅನ್ನುವ ಮಾಹಿತಿ ನಮಗೆ ಗೊತ್ತೇ ಇಲ್ಲ. ಬೆಳ್ತಂಗಡಿ ತಾಲೂಕಿನಲ್ಲಿ ಗುರುತಿಸಿರುವ ಜಾಗದಲ್ಲಿ ಫಲಕ ಅಳವಡಿಸಲಾಗಿದೆ. ಆದರೆ ಸುಳ್ಯದಲ್ಲಿ ಆ ಕೆಲಸ ಆಗಿಲ್ಲ. ಅಂದು ಜಾಗ ಕಾದಿರಿಸಿದ್ದು ಮಾತ್ರವಲ್ಲ. ಅಷ್ಟು ಜಾಗವನ್ನು ನೀಡಲು ಫಲಾನುಭವಿಗಳನ್ನು ಕೂಡ ಗುರುತಿಸಲಾಗಿತ್ತು. ಆದ್ದರಿಂದ ಸುಳ್ಯ ತಾಲೂಕಿನಲ್ಲಿರುವ ಈ ಭೂಮಿಯನ್ನು ಕಂದಾಯ ಇಲಾಖೆಯವರು ಅಳತೆ ಮಾಡಿ ಗಡಿ ಗುರುತಿಸಿ ಫಲಕ ಅಳವಡಿಸಿಕೊಡಬೇಕು ” ಎಂದು ಸುಂದರ ಒತ್ತಾಯಿಸಿದರು.
ನಿಮ್ಮಲ್ಲಿರುವ ದಾಖಲೆ ಕೊಡಿ. ಪರಿಶೀಲನೆ ನಡೆಸುತ್ತೇವೆ ಎಂದು ತಹಸೀಲ್ದಾರ್ ಮಂಜುಳಾ ಹೇಳಿದರು. ನಮ್ಮಲ್ಲಿ ಯವುದೇ ದಾಖಲೆ ಇಲ್ಲ. ಐ.ಟಿ.ಡಿ.ಪಿ.ಯವರು ನೀಡಿದ ಮಾಹಿತಿ ಮಾತ್ರ ಇದೆ. ದಾಖಲೆ ಗಳಿರುವುದು ನಿಮ್ಮ ಕಂದಾಯ ಇಲಾಖೆಯಲ್ಲಿ. ಆದ್ದರಿಂದ ನಿಮ್ಮ ದಾಖಲೆ ಪರಿಶೀಲಿಸಿ ನಮ್ಮ ಜಾಗ ಗುರುತಿಸಿಕೊಡಿ ” ಎಂದು ಸುಂದರ ಹೇಳಿದರು.
ಸರಕಾರದ ಯಾವುದೇ ಯೋಜನೆಗಳೂ ಭೂಮಿ ಆಧರಿತವಾಗಿರುತ್ತದೆ. ಈ ನೆಲದ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಜನಸಂಖ್ಯೆ ಕ್ಷೀಣಿಸುತ್ತಿದೆ. ಆರ್ಥಿಕವಾಗಿಯೂ ದುರ್ಬಲರಾಗಿದ್ದಾರೆ. ಹೀಗಾಗಿ ಸರಕಾರವೂ ಪ್ರಥಮ ಪ್ರಾಶಸ್ಯದಲ್ಲಿ ಕೊರಗ ಸಮುದಾಯಕ್ಕೆ ಕೃಷಿ ಭೂಮಿ ನೀಡಿ ಅವರ ಸ್ವಾವಲಂಬನೆ ಬದುಕಿಗೆ ದಾರಿ ತೋರಬೇಕು ಎಂದು ಸುಂದರ ಆಗ್ರಹಿಸಿದರು.
ಅಪಾಯಕಾರಿ ಮರ ತೆರವಿಗೆ ಸೂಚನೆ :
ಪಂಜದಲ್ಲಿ ಕೊರಗ ಸಮುದಾಯದ ಏಳು ಫಲಾನುಭವಿಗಳಿಗೆ ಮನೆ ನಿರ್ಮಾಣ ನಡೆದಿದ್ದು ಇದರಲ್ಲಿ ನಾಲ್ಕು ಮನೆ ಪೂರ್ಣ ಆಗಿದೆ. ಉಳಿದ ಮನೆಗಳು ಅಪೂರ್ಣವಾಗಿದೆ. ಮನೆಗಳ ಮೇಲೆಯೇ ಅಪಾಯಕಾರಿ ಮರಗಳಿವೆ. ಅವುಗಳನ್ನು ತೆರವು ಮಾಡದಿದ್ದರೆ ಮನೆಗಳ ಮೇಲೆ ಬಿದ್ದು ಪ್ರಾಣಹಾನಿಯಾಗಬಹುದು ಎಂದು ಸುಂದರ ಹೇಳಿದರು.
ಅಲ್ಲಿನ ಮರಗಳನ್ನು ತೆಗೆಯಲು ಪರ್ಮಿಶನ್ ಬಂದಿದೆ. ಮರ ತೆಗೆಯಲೆಂದು ಸಿಬ್ಬಂದಿ ಹೋಗುವಾಗ ಅಲ್ಲಿ ಸಮುದಾಯ ಭವನದ ಕಾಮಗಾರಿ ನಡೆಯುವ ಕಾರಣ ಈಗ ಬೇಡವೆಂದು ಹೇಳಿದರು. ಆದ್ದರಿಂದ ಹಿಂತಿರುಗಿ ಬಂದಿದ್ದಾರೆ ” ಎಂದು ಪಂಜ ರೇಂಜರ್ ಸಂಧ್ಯಾರವರು ಹೇಳಿದರು. ” ಅಪೂರ್ಣ ಮನೆಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಮರ, ಗೆಲ್ಲು ತೆರವಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿದ್ದು ಕೆಲ ದಿನಗಳಲ್ಲಿ ತೆರವಾಗಲಿದೆ ಎಂದು ಇಓ ರಾಜಣ್ಣ ಹೇಳಿದರು.
ಜಾಗೃತಿ ಮೂಡಿಸಿ
ಕೊರಗ ಸಮುದಾಯವರನ್ನು ನಿಂದಿಸದಂತೆ ಗ್ರಾಮ ಸಭೆಗಳಲ್ಲಿ ಜಾಗೃತಿ ಮೂಡಿಸಬೇಕು. ಅಜಲು ನಿಷೇಧ ಸಮಿತಿ ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಪ್ರತೀ ತಾಲೂಕಲ್ಲೂ ಇದೆ. ಪತಿ ತಿಂಗಳೂ ಅದರ ಸಭೆ ನಡೆಸಬೇಕು. ಕೊರಗರನ್ನು ಅವಮಾನಿಸುವ ಯಾವ ಸಂದರ್ಭವೂ ಸೃಷ್ಟಿಯಾಗಬಾರದು. ಈ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಸುತ್ತೋಲೆ ಇದ್ದರೂ ಅದನ್ನು ಯಾರೂ ಪ್ರಸ್ತಾವಿಸುತ್ತಿಲ್ಲ ಎಂದು ಸುಂದರರವರು ಹೇಳಿದರು. ಈ ಬಗ್ಗೆ ಗ್ರಾ.ಪಂ. ಗಳಿಗೆ ಸೂಚನೆ ನೀಡುವುದಾಗಿ ಇಓ ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ಮಂಜುಳಾ ವಹಿಸಿದ್ದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಮಾಜ ಕಲ್ಯಾಣಾಧಿಕಾರಿ ಕೃಷ್ಣ, ಪೊಲೀಸ್ ಸಬ್‌ಇನ್ಸಪೆಕ್ಟರ್ ಸಂತೋಷ್ ಬಿ.ಪಿ., ನ.ಪಂ.ಮುಖ್ಯಾಧಿಕಾರಿ ಬಸವರಾಜ್, ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಸುಂದರ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.


































