
ಪುತ್ತೂರು; ಮಳೆಗಾಲದಲ್ಲಿ ನಡೆಯಬೇಕಾದ ಪೂರ್ವ ಸಿದ್ಧತೆಗಳಿಗಾಗಿ ಅಧಿಕಾರಿ ವರ್ಗಕ್ಕೆ ನಡೆಸಬೇಕಾಗಿದ್ದ ಪ್ರಾಕೃತಿಕ ವಿಕೋಪ ಮುಂಜಾಗರೂಕತಾ ಸಭೆ ಕೊನೆಗೂ ಉಪ್ಪಿನಂಗಡಿಯಲ್ಲಿ ಬುಧವಾರ ನಡೆಯಿತು. ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಇಲ್ಲಿನ ೧೦೦ ವರ್ಷಕ್ಕೂ ಹಳೆಯದಾದ ಸೇತುವೆ ಸಂಚಾರ ನಿರ್ಬಂಧ ಸಹಿತ ನೆರೆ ಸಂದರ್ಭದಲ್ಲಿ ಮಾಡಬೇಕಾದ ಜಾಗರೂಕತೆಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸಾಮಾನ್ಯವಾಗಿ ಈ ಪ್ರಾಕೃತಿಕ ವಿಕೋಪ ಮುಂಜಾಗರೂಕತಾ ಸಭೆಯನ್ನು ಮೇ ತಿಂಗಳ ಆರಂಭದಲ್ಲಿ ನಡೆಯುತ್ತಿತ್ತು. ಉಪವಿಭಾಗಾಧಿಕಾರಿ ಹಾಗೂ ಶಾಸಕರ ನೇತೃತ್ವದಲ್ಲಿ ಅಧಿಕಾರಿ ವರ್ಗಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗರೂಕತೆ, ತುರ್ತು ಸಂದರ್ಭದಲ್ಲಿ ನಡೆಯಬೇಕಾದ ಕಾರ್ಯಾಚರಣೆಗಳ ಕುರಿತು ಮಾಹಿತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಮಳೆ ಆರಂಭವಾಗಿ ಒಂದು ವಾರದ ಬಳಿಕ ಸಭೆ ನಡೆಸಲಾಗಿದೆ. ಸುಮಾರು ೧೬ ವರ್ಷಗಳ ಬಳಿಕ ಮೇ ತಿಂಗಳಲ್ಲಿಯೇ ಈ ಬಾರಿ ಮಳೆರಾಯನ ಆಗಮನವಾಗಿದೆ. ಆರಂಭದಲ್ಲಿಯೇ ಮಳೆರಾಯ ಅಬ್ಬರಿಸಿದ್ದಾನೆ. ಈಗಾಗಲೇ ಹಲವು ಭಾಗಗಳಲ್ಲಿ ಸಮಸ್ಯೆಗಳ ಸರಮಾಲೆ ಉಂಟಾಗಿದೆ. ಹಲವು ಮನೆಗಳಿಗೆ ಬರೆ ಜರಿದು ಬಿದ್ದು ಹಾನಿ ಉಂಟಾಗಿದೆ. ಜೀವನದಿಗಳಾದ ಕುಮಾರಾಧಾರ ಮತ್ತು ನೇತ್ರಾವತಿ ಅಪಾಯದ ಮಟ್ಟಕ್ಕೆ ಸಮೀಪವಾಗಿ ಹರಿಯಲಾರಂಭಿಸಿವೆ. ಉಪ್ಪಿನಂಗಡಿ ಸಂಗಮ ಕ್ಷೇತ್ರವಾಗಿದ್ದು, ಇಲ್ಲಿ ಎರಡೂ ನದಿಗಳ ಅಬ್ಬರದಿಂದ ನೆರೆ ಹಾವಳಿಗೆ ತುತ್ತಾಗುವ ಪ್ರದೇಶ. ಇಲ್ಲಿ ಪ್ರತೀ ವರ್ಷವೂ ಅಪಾಯದ ಸ್ಥಿತಿ ಏರ್ಪಡುವುದು ಸಾಮಾನ್ಯವಾಗಿದೆ. ಹಾಗಿದ್ದರೂ ಮುಂಜಾಗರೂಕತಾ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಕೊನೆಗೂ ಪುತ್ತೂರು ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆಯ ಆಯುಕ್ತ ಮಧು ಎಸ್ ಮನೋಹರ್ ಮತ್ತಿತರರು ಭಾಗಿಯಾಗಿದ್ದರು.
ಆನ್‌ಲೈನ್ ಸಭೆ ನಡೆಸಿದ್ದೇವೆ..!
ಪುತ್ತೂರು ಉಪವಿಭಾಗದ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಬೇಕಾಗಿದ್ದ ಪ್ರಾಕೃತಿಕ ವಿಕೋಪ ಮುಂಜಾಗರೂಕತಾ ಸಭೆ ಇನ್ನೂ ನಡೆದಿಲ್ಲ. ಈ ಬಗ್ಗೆ ಪುತ್ತೂರು ಪತ್ರಕರ್ತರು ಹಾಗೂ ಅಧಿಕಾರಿಗಳಿದ್ದ ಗ್ರೂಫ್‌ನಲ್ಲಿ ಕೆಲ ದಿನಗಳ ಹಿಂದೆ ಚರ್ಚೆ ನಡೆದಿದೆ. ಆಗ ಅಧಿಕಾರಿ ವರ್ಗದಿಂದ ನಾವು ಆನ್‌ಲೈನ್ ಸಭೆ ನಡೆಸಿದ್ದೇವೆ ಎಂಬ ಮಾಹಿತಿ ಲಭ್ಯವಾಗಿತ್ತು. ಕಳೆದ ವರ್ಷ ಉಪವಿಭಾಗಾಧಿಕಾರಿಯಾಗಿದ್ದ ಜುಬಿನ್ ಮೊಹಾಪಾತ್ರ ಅವರು ಉಪವಿಭಾಗದ ಅಧಿಕಾರಿಗಳು ಹಾಗೂ ಪತ್ರಕರ್ತರನ್ನು ಕರೆದು ಪೂರ್ವ ತಯಾರಿ ಸಭೆ ನಡೆಸಿದ್ದರು. ಮಳೆಯ ಆರಂಭದ ಮುನ್ನಾ ತೆಗೆದುಕೊಳ್ಳಬೇಕಾದ ಎಚ್ಚರಿಕೆ, ಅಪಾಯ ಉಂಟಾದಾಗ ಮಾಡಬೇಕಾದ ಯೋಜನೆ, ಅಪಾಯಕಾರಿ ಮರಗಳ ತೆರವು, ತುರ್ತು ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ತಾಲೂಕಿನಲ್ಲಿ ತುರ್ತು ಸಂದರ್ಭಕ್ಕೆ ೨೪ ಗಂಟೆಯೂ ತೆರೆದಿರಬೇಕಾದ ದೂರವಾಣಿಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ನೀಡಿದ್ದರು. ಈ ಮಾಹಿತಿಗಳ ಪತ್ರಿಕೆಗಳ ಮೂಲಕ ಸಾರ್ವಜನಿಕರಿಗೂ ರವಾನೆಯಾಗಿತ್ತು. ಆದರೆ ಈ ಬಾರಿ ಅಂತಹ ಯಾವ ಮಾಹಿತಿಗಳೂ ಸಾರ್ವಜನಿಕರಿಗೆ ಸಿಕ್ಕಿಲ್ಲ.
ನೆರೆ ಮುಂಜಾಗರೂಕತೆ ಹಾಗೂ ಮಳೆಗಾಲದ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳು ಕೈಗೊಳ್ಳುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಅತೀ ಅಗತ್ಯವಾಗಿದೆ. ಜನತೆಯ ಸಹಕಾರವೂ ಇದಕ್ಕೆ ಬೇಕಾಗಿದೆ. ಈ ಹಿನ್ನಲೆಯಲ್ಲಿಯೇ ಈ ಹಿಂದಿನ ಎಲ್ಲಾ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಇಂತಹ ಸಭೆಗಳನ್ನು ನಡೆಸುತ್ತಿದ್ದರು. ಈ ಬಾರಿ ಮಾತ್ರ ಆನ್‌ಲೈನ್ ಸಭೆ ಯಾಕೆ ಎಂಬ ಪ್ರಶ್ನೆಗೆ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.