ಕೊಡಗು ಸಂಪಾಜೆಯ ಚೆಡಾವು ಬಳಿ ಸರಣಿ ಅಪಘಾತ; ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಕಾರು – ಟಿಪ್ಪರ್ಗೆ ಸಿಲುಕಿ ಆಟೋ ಚಾಲಕ ಮೃತ್ಯು

ಸುಳ್ಯ- ಕಾರೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಆಟೋ ಪಲ್ಟಿಯಾಗಿ ಗಂಭೀರ ಗಾಯಗೊಂಡ ಆಟೋ ಚಾಲಕ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಟಿಪ್ಪರ್ಗೆ ಸಿಲುಕಿ ಸ್ಥಳದಲ್ಲೇ ಮೃತ ಪಟ್ಟ ಘಟನೆ ಕೊಡಗು ಸಂಪಾಜೆಯ ಚೆಡಾವು ಬಳಿ ಗುರುವಾರ ಸಂಭವಿಸಿದೆ.


ಆಟೋ ರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು ಕೊಡಗು ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಗುದ್ದಿ ಪರಾರಿಯಾಗಿದೆ. ಈ ವೇಳೆ ಮುಂಭಾಗದಲ್ಲಿ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಕ್ರಕ್ಕೆ ಸಿಲು ಆಟೋ ಚಾಲಕ ದಿ.ಬಿಸಿಲುಮನೆ ರಾಮಣ್ಣ ಗೌಡರ ಪುತ್ರ ಸುಂದರ ಚಿಟ್ಟಿಕ್ಕಾನ (೫೬) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ವೇಳೆ ಆಟೋದಲ್ಲಿದ್ದ ಇನ್ನೋರ್ವ ಪ್ರಯಾಣಿಕನಿಗೂ ಗಾಯಗಳಾಗಿದೆ.
ಸುಂದರ ಅವರು ಕೊಡಗು ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಮತ್ತು ಉಪಾಧ್ಯಕ್ಷರಾಗಿ ದುಡಿದವರು. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿದ್ದವರು. ಗುರುವಾರ ಅಪರಾಹ್ನ ಗ್ರಾ.ಪಂ.ಸದಸ್ಯೆ ಅನಿತಾ ಅವರ ತಾಯಿ ಪದ್ಮಾವತಿ ಅವರನ್ನು ಚಡವು ಬಳಿಯ ಅವರ ಮನೆಗೆ ಬಿಡಲು ಸಂಪಾಜೆಯಿಂದ ಚಡವು ಕಡೆಗೆ ರಿಕ್ಷಾದಲ್ಲಿ ಬಾಡಿಗೆಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಅತಿವೇಗದಿಂದ ಬಂದ ಕಾರು ಆಟೋಗೆ ಗುದ್ದಿಕೊಂಡು ನಿಲ್ಲಿಸದೆ ಮಡಿಕೇರಿ ಕಡೆಗೆ ಪರಾರಿಯಾಗಿದೆ. ಮೃತರಿಗೆ ಪತ್ನಿ, ಪುತ್ರ ಭೂಸೇನೆಯಲ್ಲಿ ಯೋಧರಾಗಿರುವ ದೇವಿಪ್ರಸಾದ್, ಇಬ್ಬರು ಪುತ್ರಿಯರು ಇದ್ದಾರೆ. ಕೊಡಗು ಸಂಪಾಜೆ ಹೊರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.