ಕೊಂಕಣಿ ಕ್ಯಾಥೋಲಿಕ್ ವಕೀಲರ ಸಂಘದ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ಮಂಗಳೂರು: ಕೊಂಕಣಿ ಕ್ಯಾಥೋಲಿಕ್ ವಕೀಲರ ಸಂಘದ ವತಿಯಿಂದ ೭೭ ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಫೆಬ್ರವರಿ ೧ ರಂದು ಜಪ್ಪು ಸಂತ ಅಂತೋನಿ ಆಶ್ರಮದ ಮ್ಯೂಸಿಯಂ ಸಭಾಂಗಣದಲ್ಲಿ ಆಚರಿಸಲಾಯಿತು. ದೇವರ ಆಶೀರ್ವಾದವನ್ನು ಕೋರುವ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಕಣಿ ಕ್ಯಾಥೋಲಿಕ್ ವಕೀಲರ ಸಂಘದ ಅಧ್ಯಕ್ಷ ಸುಶಾಂತ್ ಸಿ. ಎ. ಸಲ್ಡಾನ್ಹಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡದ ಯುವಜನ ಸೇವೆ ಮತ್ತು ಕ್ರೀಡಾ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿ&#೩೯;ಸೋಜಾ ಮತ್ತು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೊ ಅವರು ಭಾಗವಹಿಸಿದ್ದರು, ಸಂಘದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾ. ಜೆ.ಬಿ.ಕ್ರಾಸ್ತಾ ಅವರು ಗೌರವ ಅತಿಥಿಯಾಗಿದ್ದರು. ಸಂಘದ ಉಪಾಧ್ಯಕ್ಷ ರಿಚಾರ್ಡ್ ಡಿ&#೩೯;ಕೋಸ್ಟಾ ಮತ್ತು ಅಲೋಶಿಯಸ್ ಲೋಬೊ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಔಪಚಾರಿಕವಾಗಿ ಉದ್ಘಾಟಿಸಲಾಯಿತು, ಬಳಿಕ ಮಹಾತ್ಮಾಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು, ಹಿರಿಯ ವಕೀಲ ಕ್ಲಾರೆನ್ಸ್ ಪಾಯ್ಸ್ ಅವರ ಸುದೀರ್ಘ ಅವಧಿಯ ಕಾನೂನು ಸೇವೆ ಮತ್ತು ಕ್ರೈಸ್ತ ಸಮುದಾಯಕ್ಕೆ ನೀಡಿದ ವಿವಿಧ ಕೊಡುಗೆಗಳನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡ ಶಾಲೆಟ್ ಪಿಂಟೊ ಮತ್ತು ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಅಲೋಶಿಯಸ್ ಲೋಬೊ ಅವರನ್ನು ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ಮೂಡುಬಿದಿರೆ ಕ್ಷೇತ್ರ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಮರ್ವಿನ್ ಜಾನ್ಸನ್ ಲೋಬೊ, ಮಂಗಳೂರು ಉತ್ತರ ಕ್ಷೇತ್ರ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ನವೀನ್ ಸಂತೋಷ್ ಪಾಯ್ಸ್, ಮುಡಿಪು ಸಂತ ಜೋಸೆಫ್ ವಾಸ್ ಚರ್ಚ್ ನ ಪಾಲನಾ ಮಂಡಳಿಯ ಕಾರ್ಯದರ್ಶಿ ರೋಷನ್ ಡಿ&#೩೯;ಸೋಜಾ, ಬಜಾಲ್ ಹೋಲಿ ಸ್ಪಿರಿಟ್ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷ ದೀಪಕ್ ಡಿ&#೩೯;ಸೋಜಾ, ಕರ್ನಾಟಕ ಕಾನೂನು ವಿಶ್ವ ವಿದ್ಯಾನಿಲಯ ನಡೆಸಿದ ಎಲ್.ಎಲ್.ಬಿ. ಪರೀಕ್ಷೆಯಲ್ಲಿ ೧೦ ನೇ ಯಾಂಕ್ ಪಡೆದ ಎನ್ಸಿಟಾ ಒಲಿವಿಯಾ ಪಿಂಟೊ, ಪರಿಸರ ಕಾನೂನು ವಿಷಯದ ಯಾಂಕ್ ಗಳಿಸಿದ ಫಾ. ರಾಯನ್ ತಿಶಾನ್ ಪಿಂಟೊ, ಭಾರತ್ ಯೆಟ್ ೨೦೨೭- ರೋಲ್ ಆಫ್ ಯೂತ್ ಎಂಬ ಪುಸ್ತಕಕ್ಕೆ ನವದೆಹಲಿಯ ಭಾರತ್ ಮಂಟಪಂ ನಲ್ಲಿ ದೇಶ್ ರತ್ನ ಪ್ರಶಸ್ತಿ ೨೦೨೫ ಸ್ವೀಕರಿಸಿದ ರೇಷಲ್ ಬ್ರೆಟ್ನಿ ಫೆನಾಂಡಿಸ್, ಕಾಂಗ್ರೆಸ್ ಕಾನೂನು ಘಟಕದ ಉಪಾಧ್ಯಕ್ಷೆ ಝೀಟಾ ಪ್ರಿಯಾ ಮೊರಾಸ್ ಅವರು ಸನ್ಮಾನವನ್ನು ಸ್ವೀಕರಿಸಿದರು.
ಪ್ರದೀಪ್ ಡಿ&#೩೯;ಸೋಜಾ ಅವರು ಮಾತನಾಡಿ, ಸರಕಾರಿ ವಲಯದಲ್ಲಿ ಲಭ್ಯವಿರುವ ವಿಶಾಲ ಅವಕಾಶಗಳನ್ನು ವಿವರಿಸಿ ಯುವ ವಕೀಲರು ಸರಕಾರಿ ಸೇವೆಗೆ ಸೇರ ಬಹುದು ಎಂದರು. ಫಾ. ಜೆ.ಬಿ. ಕ್ರಾಸ್ತಾ ಅವರು ತಮ್ಮ ಸಂದೇಶದಲ್ಲಿ ನೈತಿಕ ಜವಾಬ್ದಾರಿ, ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವಲ್ಲಿ ವಕೀಲರ ಪಾತ್ರ ಮಹತ್ವದ್ದು ಎಂದರು. ಅಧ್ಯಕ್ಷತೆ ವಹಿಸಿದ್ದ ಸುಶಾಂತ್ ಸಿ.ಎ. ಸಲ್ಡಾನ್ಹಾ ಅವರು ಮಾತನಾಡಿ, ಸಾಧಕರನ್ನು ಅಭಿನಂದಿಸಿದರು ಮತ್ತು ಸಮುದಾಯವನ್ನು ಬಲಪಡಿಸಲು ಒಟ್ಟಾಗಿ ಸೇರ ಬೇಕು. ಈ ನಿಟ್ಟಿನಲ್ಲಿ ವಕೀಲರ ಪಾತ್ರ ಮಹತ್ವದ್ದು ಎಂದು ಹೇಳಿದರು.ಡಿಯೋನಾ ಎಲ್. ಡಿ&#೩೯;ಸೋಜಾ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ಪ್ರಿಯಾ ಡಿಸೋಜಾ ಸ್ವಾಗತಿಸಿದರು, ರೋಶನ್ ಡಿಸೋಜಾ ವಂದಿಸಿದರು.