
ತಿರುವನಂತಪುರಂ, ಜೂ.30- ಕಾಂಗ್ರೆಸ್ ಪಕ್ಷದಳಗಿನ ಯಾವುದೇ ಆಂತರಿಕ ಸಮಸ್ಯೆಗಳನ್ನು ಸಾರ್ವಜನಿಕ ಚರ್ಚೆಯ ಬದಲು ಖಾಸಗಿಯಾಗಿ ಪಕ್ಷದ ನಾಯಕತ್ವದ ಜೊತೆಗೆ ಚರ್ಚೆ ನಡೆಸಲಾಗುವುದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಹೊಗಳಿದ ಶಶಿ ತರೂರ್ ನಡೆಗೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ಮತ್ತು ಅತೃಪ್ತಿ ಹೊರಹಾಕಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
ಅಹಮದಾಬಾದ್ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಶಿ ತರೂರ್, ಕಾಂಗ್ರೆಸ್ ಪಕ್ಷದೊಳಗಿನ ವಿಷಯಗಳ ಕುರಿತು ಸಾರ್ವಜನಿಕವಾಗಿ ಮಾತನಾಡುವುದಿಲ್ಲ, ಬದಲಾಗಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.
ಪಕ್ಷದ ವಿಷಯಗಳನ್ನು ಚರ್ಚಿಸಲು ಸಾರ್ವಜನಿಕ ವೇದಿಕೆಗಳನ್ನು ಬಳಸುವುದಿಲ್ಲ .ಸಮಸ್ಯೆಗಳಿದ್ದರೆ, ಅವುಗಳನ್ನು ಖಾಸಗಿಯಾಗಿ ಚರ್ಚಿಸಲಾಗುತ್ತದೆ.” ಸಮಯ ಬಂದಾಗ ಪಕ್ಷದ ನಾಯಕತ್ವದ ಜೊತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ರಷ್ಯಾದ ಅಧಿಕಾರಿಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ನಡೆಸಿದ ಮಾತುಕತೆಗಳು ರಾಜತಾಂತ್ರಿಕತೆಯ ಭಾಗವಾಗಿದ್ದವು. “ಕೆಲವರು ಊಹಿಸಿದಂತೆ ನಾಟಕೀಯ ಅಥವಾ ರಹಸ್ಯ ಏನೂ ಇರಲಿಲ್ಲ ಜೊತೆಗೆ ಜೇಮ್ಸ್ ಬಾಂಡ್ ಶೈಲಿಯ ಕಾರ್ಯಾಚರಣೆಗಳಿಲ್ಲ” ಎಂದು ಅವರು ಹೇಳಿದ್ದಾರೆ.
ಹಾರಲು ಅನುಮತಿ ಕೇಳಬೇಡಿ
“ಹಾರಲು ಅನುಮತಿ ಕೇಳಬೇಡಿ. ರೆಕ್ಕೆಗಳು ನಿಮ್ಮವು. ಮತ್ತು ಆಕಾಶ ಯಾರಿಗೂ ಸೇರಿಲ್ಲ.” ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಪರೋಕ್ಷವಾಗಿ ಶಶಿ ತರೂರ್ ಅವರಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಹೊಗಳಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸಿದ ಶಶಿ ತರೂರ್ ನಡೆಗೆ ಕಾಂಗ್ರೆಸ್ ತೀಕ್ಷ್ಮವಾಗಿ ಪ್ರತಿಕ್ರಿಯಿಸಿ ನಿಮ್ಮ ದಾರಿ ನೋಡಿಕೊಳ್ಳುವುದಿದ್ದರೆ ನೋಡಿಕೊಳ್ಳಬಹುದು ಎಂದು ಪರೋಕ್ಷವಾಗಿ ಟಾಂಗ್ ನೀಡಿದೆ.