ಕೈಲಾಸಂ ನಾಟಕಗಳ ಕುರಿತು ಮಾತನಾಡುವುದು ಕಷ್ಟ

ಸಂಜೆವಾಣಿ ನ್ಯೂಸ್
ಮೈಸೂರ್.ಅ.06:
-ಇವತ್ತಿನ ಕಾಲಮಾನದಲ್ಲಿ ಕೈಲಾಸಂ ನಾಟಕಗಳ ಕುರಿತು ಮಾತು ಕಷ್ಟವೆನಿಸುತ್ತವೆ. ಅವರ ಬರವಣಿಗೆ ಮೂರು ತಲೆಮಾರು ಕಳೆದಿದ್ದು, ನಾಟಕಗಳನ್ನು ಯಾವ ಕಾರಣಕ್ಕಾಗಿ ರಚಿಸಿದರು ಎಂಬುದು ಪೂರ್ಣವಾಗಿ ಇವತ್ತಿನ ಮನಸ್ಸಿಗೆ ಹೊಕ್ಕುವುದಿಲ್ಲ ಎಂದು ಚಾಮರಾಜನಗರದ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಅಭಿಪ್ರಾಯಪಟ್ಟರು.


ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಹಾರ್ಡ್ವಿಕ್ ಪಿಯು ಕಾಲೇಜಿನ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಆಯೋಜಿಸಿದ್ದ ಕೈಲಾಸಂ ಒಂದು ವಿಲಕ್ಷಣ ಪ್ರತಿಭೆ ವಿಷಯ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಲಾಸಂಗಿಂತ ಅವರ ವೈದೇಹ್ಯಗಳು, ದಂತ ಕಥೆಗಳು ಸಾಕಷ್ಟಿವೆ. ನಿರ್ದಿಷ್ಟವಾಗಿ ಅವರ ಬರವಣಿಗೆಯ ನಾಟಕಗಳ ಬಗ್ಗೆ ಮಾತನಾಡಿದವರು, ಅವನ್ನಿಟ್ಟುಕೊಂಡು ಪ್ರದರ್ಶನ ಮಾಡಿದವರು ಕಡಿಮೆ. ಕೈಲಾಸಂ ನಾಟಕಗಳ ರಾಶಿಯಲ್ಲಿ ಟೊಳ್ಳು-ಗಟ್ಟಿ ಅವರ ದೊಡ್ಡ ಹುಡುಕಾಟ. ಟೊಳ್ಳು ಯಾವುದು, ಗಟ್ಟಿ ಯಾವುದು ಎಂಬುದನ್ನು ಎಲ್ಲಾ ನಾಟಕಗಳಲ್ಲೂ ಹುಡುಕುತ್ತಾ ಬಂದಿದ್ದಾರೆ. ಟೊಳ್ಳು ಗಟ್ಟಿ ಇವೆರಡನ್ನು ಮುಖಾ ಮುಖಿಯಾಗಿಸಿದಾಗ ಉತ್ತಮ ನಾಟಕ ಮೂಡಿಬಂದಿವೆ ಎಂದರು.


ಟೊಳ್ಳು ಮುಖ್ಯವಾಗಿಸಿಕೊಂಡಾಗ ಲೇವಡಿ ನಾಟಕಗಳು ಮೂಡಿವೆ. ಟೊಳ್ಳು ಎಂದರೆ ಕೇವಲ ಮೌಲ್ಯವಷ್ಟೆ ಅಲ್ಲ, ನಮ್ಮ ಸೋಗುಗಳು, ಸುಳ್ಳುಗಳನ್ನು ಬಿತ್ತರಿಸುವುದು. ಅವರ ನಾಟಕಗಳ ಎಲ್ಲಾ ಪಾತ್ರಗಳು ಬ್ರಾಹ್ಮಣ್ಯದ ಪಾತ್ರಗಳೇ. ಆದರೆ, ಅವರು ಬದುಕಿನಲ್ಲಿ ತಮ್ಮನ್ನು ತಾವು ಶೋಧಿಸಿಕೊಂಡು ಬ್ರಾಹ್ಮಣ್ಯದ ಎಲ್ಲ ಟೊಳ್ಳುಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ ಎಂದು ಬಣ್ಣಿಸಿದರು.
ಕನ್ನಡ ನಾಟಕಗಳಿಗಿಂತ ಇಂಗ್ಲಿಷ್ ನಾಟಕಗಳು ಬಹಳ ದೊಡ್ಡ ವಿಶ್ವವನ್ನು ತೆರೆದುಕೊಳ್ಳುತ್ತವೆ. ಕೈಲಾಸಂ ಅವರ ಐದಾರೂ ಕನ್ನಡ ನಾಟಕಗಳ ರಿಪೇರಿ ಮಾಡಿ ಇವತ್ತಿಗೂ ನಮಗೆ ನಾಟಕ ಮಾಡಬಹುದಾಗಿದೆ. ಹೀಗಾಗಿ ಕೈಲಾಸಂ ಅವರನ್ನು ಮತ್ತೆ ಮತ್ತೆ ಓದುವ ಅಗತ್ಯವಿದೆ ಎಂದು ತಿಳಿಸಿದರು.


ಲೇಖಕ ಬಿ.ಆರ್.ಮಂಜುನಾಥ್ ಮಾತನಾಡಿ, ಕೈಲಾಸಂ ಅವರ ಬಗ್ಗೆ ಬಂದಿರುವ ಅವರ ಸಮಕಾಲೀನ ವಿಮರ್ಶೆಯಲ್ಲಿ, ಅವರ ಪ್ರತಿಭೆಗೆ ಒತ್ತಿದೆ. ಅವರ ಮಾತುಗಾರಿಕೆಗೆ ಬೆರಗಾಗಿರುವಂತಹ ಕ್ಷಣಗಳಿವೆ. ಅವರ ತ್ಯಾಗದ ಹುಮ್ಮಸ್ಸಿನಿಂದ ಪ್ರಭಾವಕ್ಕೊಳಗಾಗಿರುವವರು ಇದ್ದಾರೆ. ಇದು ಕನ್ನಡ ವಿಮರ್ಶೆಯಲ್ಲಿ ಒಂದು ಭಾಗವಾದರೆ. ಎರಡನೇ ಭಾಗವಾಗಿ ಕೈಲಾಸಂ ನಾಟಕಗಳನ್ನು ಪ್ರದರ್ಶನ ಮಾಡಲು ಸಾಧ್ಯವಿಲ್ಲ, ಮಾತು ಹೆಚ್ಚಿವೆ. ಭಾಷೆಯನ್ನು ಬಳಸಲಾಗದ ಶೈಲಿಗಳಲ್ಲಿವೆ ಎಂಬ ಮಾತುಗಳಿವೆ ಎಂದರು. ನಂತರ ಸಭಿಕರೊಂದಿಗೆ ಕೈಲಾಸಂ ಒಂದು ವಿಲಕ್ಷಣ ಪ್ರತಿಭೆ ವಿಷುಂದ ಕುರಿತು ಚರ್ಚೆ ನಡೆಸಲಾಯಿತು.
ಹಿರಿಯ ರಂಗ ನಿರ್ದೇಶಕ ಹೆಗ್ಗೋಡು ಪ್ರಸನ್ನ, ನಾಟಕಕಾರ ಶಶಿಧರ ಡೋಂಗ್ರೆ ಮತ್ತಿತರರು ಉಪಸ್ಥಿತರಿದ್ದರು.