
ಪುತ್ತೂರು: ಕಳೆದ ಮೂರು ವರ್ಷಗಳಿಂದ ಭತ್ತ ಕೃಷಿ ಆರಂಭಕ್ಕೆ ಹೆಚ್ಚು ತೊಂದರೆ ನೀಡದ ವರುಣ ಈ ಬಾರಿ ಮಾತ್ರ ಮತ್ತೆ ಸಮಸ್ಯೆ ತಂದೊಡ್ಡಿದ್ದಾನೆ. ಮೇ ತಿಂಗಳಲ್ಲಿ ಸಾಕಷ್ಟು ಮಳೆ ಸುರಿಯುತ್ತಿದ್ದ ಕಾರಣದಿಂದ ಭತ್ತದ ಏಣೇಲು ಬೆಳೆಗೆ ಮುನ್ನುಡಿ ಬರೆಯಲು ಯಾವುದೇ ವಿಘ್ನ ಇರಲಿಲ್ಲ. ಆದರೆ ಈ ಸಲ ಮುಂಗಾರುಪೂರ್ವ ಮಳೆ ಕೈಕೊಟ್ಟ ಪರಿಣಾಮ ಏಣೇಲು ಬೆಳೆ ಆರಂಭಿಸಲು ರೈತವರ್ಗ ಪರದಾಡುವಂತಾಗಿದೆ.
ರೈತನ ಕೃಷಿ ಚಟುವಟಿಕೆ ಮೇ ತಿಂಗಳಲ್ಲಿ ಸುರಿಯಬೇಕಾಗಿದ್ದ ಮುಂಗಾರುಪೂರ್ವ ಮಳೆಗೆ ಕಾಯುತ್ತಿದ್ದ ರೈತವರ್ಗ ವರುಣನ ಅವಕೃಪೆಯಿಂದ ಕಂಗಾಲಾಗಿದೆ. ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ಸಾಕಷ್ಟು ಮಳೆ ಸುರಿದು ಭತ್ತದ ಗದ್ದೆಗಳು ನೀರಿನಿಂದ ತುಂಬಿರಬೇಕಿತ್ತು. ಆದರೆ ಈಗ ಗದ್ದೆಯಲ್ಲಿ ಹನಿ ನೀರು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಏಣೇಲು ಬೆಳೆಯ ಆರಂಭ ಮತ್ತಷ್ಟು ತಡವಾಗಲಿದೆ. ಜೂನ್ ತಿಂಗಳ ಆರಂಭದಲ್ಲಿ ದಿನಗಳಲ್ಲಿ ನಾಟಿ ಮಾಡಬೇಕಿದ್ದ ಭತ್ತದ ಬೆಳೆಗೆ ಇನ್ನೂ ನೇಜಿ ತಯಾರಿಗೇ ರೈತ ಇಳಿದಿಲ್ಲ. ಕಾರಣ ಮುಂಗಾರುಪೂರ್ವ ಮಳೆ ಇಲ್ಲ. ಮುಂಗಾರು ಮಳೆಯ ಆರಂಭದ ಸೂಚನೆಯೂ ಇಲ್ಲ. ರೈತನ ಭತ್ತದ ಗದ್ದೆಗಳಲ್ಲಿ ಕಳೆ ಗಿಡಗಳು ಬೆಳೆದು ನಿಂತಿವೆ. ಗದ್ದೆಯನ್ನು ಹದ ಮಾಡುವ ಕೆಲಸಕ್ಕೂ ಮಳೆಯ ಕೊರತೆಯಿಂದ ಸಾಧ್ಯವಾಗಿಲ್ಲ. ಮಳೆ ತಡವಾದಷ್ಟೂ ರೈತ ಬೆಳೆಯುವ ಬೆಳೆಯೂ ತಡೆವಾಗುತ್ತಿದೆ. ಇದರಿಂದ ಮುಂದೆ ಸುಗ್ಗಿ ಬೆಳೆಗೂ ಸಮಸ್ಯೆ ಉಂಟಾಗುತ್ತದೆ. ರೈತ ವರ್ಗ ಇಂದಿಗೂ ಮಳೆಯಾಧಾರಿತ ಬೆಳೆಯನ್ನು ನಂಬಿಕೊಂಡಿದ್ದು, ಅನಿಯಮಿತ ಮಳೆ ರೈತವರ್ಗಕ್ಕೆ ಸದಾ ಸಂಕಷ್ಟವನ್ನೇ ಉಂಟುಮಾಡುತ್ತಿದೆ.
ಮೇ ತಿಂಗಳಲ್ಲಿ ಮುಂಗಾರುಪೂರ್ವ ಮಳೆ ಸಾಕಷ್ಟು ಸುರಿಯುತ್ತಿದ್ದರೆ ಈಗಾಗಲೇ ರೈತವರ್ಗ ನೇಜಿ ತಯಾರಿಯನ್ನು ಆರಂಭಿಸಿ ಗದ್ದೆ ಹದ ಮಾಡುವ ಕೆಲಸಕ್ಕೂ ಮುಂದಾಗುತ್ತಿತ್ತು. ಜೂನ್ ತಿಂಗಳ ಮೊದಲ ಅಥವಾ ೨ನೇ ವಾರದಲ್ಲಿ ನೇಜಿ ನಾಟಿಯನ್ನೂ ಮಾಡುತ್ತಿದ್ದರು. ಸಾಧಾರಣವಾಗಿ ಸೆಪ್ಟಂಬರ್-ಅಕ್ಟೋಬರ್ ತಿಂಗಳಿಗೆ ಬೆಳೆಯ ಕೊಲು ಆಗಿ ಮುಂದೆ ಸುಗ್ಗಿ ಬೆಳೆಯ ತಯಾರಿಯೂ ನಡೆಯುತ್ತಿತ್ತು. ಇದೀಗ ಜೂನ್ ತಿಂಗಳ ಆರಂಭವಾದರೂ ಮಳೆರಾಯ ತನ್ನ ಕೃಪೆ ತೋರಿಲ್ಲ. ವಾಯುಭಾರ ಕುಸಿತದ ಪರಿಣಾಮ ಒಂದಷ್ಟು ಮಳೆ ಬಂದಿದ್ದರೂ ಭತ್ತದ ಬೇಸಾಯಕ್ಕೆ ಯಾವುದೇ ಪ್ರಯೋಜನವಾಗುವಂತೆ ವಾತಾವರಣ ನಿರ್ಮಾಣವಾಗಿಲ್ಲ.
ವರ್ಷದಿಂದ ವರ್ಷಕ್ಕೆ ಭತ್ತದ ಕೃಷಿ ರೈತನ ಪಾಲಿಗೆ ಕಷ್ಟ ಸಾಧ್ಯವಾಗಿ ಪರಿಣಮಿಸುತ್ತಿದೆ. ಸಾಕಷ್ಟು ರೈತರು ಭತ್ತದ ಮಹತ್ವವನ್ನು ಮರೆತು ಭತ್ತದ ಬೆಳೆಯಿಂದ ದೂರವಾಗಿದ್ದಾರೆ. ಅಡಿಕೆ ತೆಂಗು ಬೆಳೆಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಒಂದಷ್ಟು ರೈತರು ಏನೇ ಕಷ್ಟ ಬರಲಿ ನಮ್ಮ ಗದ್ದೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈಗ ಭತ್ತದ ಬೆಳೆ ಲಾಭದಾಯಕವಲ್ಲ ಎಂಬ ಅರಿವಿದ್ದರೂ ತಮಗೆ ಬೇಕಾದಷ್ಟು ಅಕ್ಕಿಯನ್ನು ತಾವೇ ಬೆಳೆಸಿಕೊಳ್ಳಬೇಕು ಎಂಬ ಸಾಂಪ್ರದಾಯಿಕ ಮನಸ್ಸು ಇವರದ್ದಾಗಿದೆ. ಹಾಗಾಗಿ ಹಳೆಯ ಪದ್ದತಿಯನ್ನು ಬಿಟ್ಟು ಯಾಂತ್ರೀಕೃತ ವ್ಯವಸ್ಥೆಯಲ್ಲಿ ಭತ್ತದ ಬೆಳೆಗಳನ್ನು ಉಳಿಸಿಕೊಳ್ಳುವ ಕಾಯಕ ನಡೆಸುತ್ತಿದ್ದಾರೆ. ವಾಣಿಜ್ಯ ಬೆಳೆಗಳ ಆಕರ್ಷಣೆಯ ನಡುವೆಯೂ ಭತ್ತದ ಕೃಷಿಕರಾಗಿ ಉಳಿದುಕೊಂಡಿದ್ದಾರೆ. ಕೂಲಿಯಾಳುಗಳ ಕೊರತೆ ಇದ್ದರೂ ಯಂತ್ರಗಳನ್ನು ನಂಬಿಕೊಂಡು ಭತ್ತದ ಬೆಳೆಗೆ ಮುನ್ನುಡಿ ಬರೆಯುವ ಕೆಲಸ ಮಾಡುತ್ತಿದ್ದಾರೆ. ಭತ್ತದ ಗದ್ದೆಗಳನ್ನು ಹದ ಮಾಡುವ ಉಳಮೆಯಿಂದ ಹಿಡಿದು ನೇಜಿನಾಟಿ, ಕೊಲು, ಭತ್ತ ಬೇರ್ಪಡಿಸುವಿಕೆ ಎಲ್ಲದಕ್ಕೂ ಈಗ ಮಿಷನ್. ಆದರೆ ಈ ಸ್ವಾವಲಂಬಿ ರೈತನ ಪಾಲಿಗೆ ತೊಂದರೆ ಕೊಡುತ್ತಿರುವುದು ಮಾತ್ರ ಮಳೆರಾಯ.
ಮಕಾಡೆ ಮಲಗಿದ ‘ಯಂತ್ರಧಾರೆ’
ಕಳೆದ ಕೆಲ ವರ್ಷಗಳಿಂದ ಭತ್ತದ ಕೃಷಿಕನ ಪಾಲಿಗೆ ರಕ್ಷಕನಾಗಿದ್ದ ಸರ್ಕಾರದ ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾಯೋಜಕತ್ವದ ‘ಯಂತ್ರಧಾರೆ’ ಪ್ರಸ್ತುತ ಬಹುತೇಕ ದುರ್ಬಲಗೊಂಡು ಮಕಾಡೆ ಮಲಗಿದೆ. ಬಹುತೇಕ ಕೇಂದ್ರಗಳಲ್ಲಿ ರೈತನಿಗೆ ಬೇಕಾದ ಯಾವ ಯಂತ್ರಗಳೂ ಲಭ್ಯವಿಲ್ಲ. ಇದ್ದರೂ ನಾದುರಸ್ಥಿ ಸ್ಥಿತಿಯಲ್ಲಿವೆ. ಅಲ್ಲೊಂದು ಇಲ್ಲೊಂದು ಕೇಂದ್ರದಲ್ಲಿ ಉಳಿದುಕೊಂಡ ಭತ್ತದ ಕೃಷಿಯಂತ್ರಗಳು ಸಕಾಲದಲ್ಲಿ ರೈತನಿಗೆ ದೊರೆಯುತ್ತಿಲ್ಲ. ಹಾಗಾಗಿ ಪ್ರಸ್ತುತ ರೈತವರ್ಗ ಖಾಸಗಿ ವ್ಯವಸ್ಥೆಯ ಯಂತ್ರಗಳನ್ನೇ ನಂಬಿಕೊಳ್ಳಬೇಕಾಗಿದೆ. ಇದು ರೈತನ ಪಾಲಿಗೆ ಮತ್ತೊಂದು ಸಂಕಷ್ಟವನ್ನು ತಂದೊಡ್ಡಿದೆ. ತಮ್ಮ ವ್ಯಾಪ್ತಿಯಲ್ಲಿಯೇ ಸಿಗುತ್ತಿದ್ದ ಕೃಷಿಯಂತ್ರಗಳನ್ನು ಈಗ ದೂರದಿಂದ ಖಾಸಗಿ ವ್ಯವಸ್ಥೆಯನ್ನು ಅವಲಂಭಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಭತ್ತಕೃಷಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ರೈತವರ್ಗಕ್ಕೆ ಸರ್ಕಾರದ ಈ ಕೊಡುಗೆಯೂ ಇಲ್ಲದಂತಾಗಿರುವುದು ಈಗ ಭತ್ತ ಉಳಿಸಿಕೊಂಡ ರೈತರೂ ಭವಿಷ್ಯದಲ್ಲಿ ಭತ್ತದ ಕೃಷಿಯಿಂದ ದೂರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಬೇಕಾಗಿದೆ ಕೇರಳ ಮಾದರಿ
ಭತ್ತದ ಕೃಷಿಗೆ ಅತ್ಯಂತ ಪೂರಕ ವ್ಯವಸ್ಥೆಯನ್ನು ಕೇರಳ ಸರ್ಕಾರ ಮಾಡುತ್ತಿದೆ. ಅದೇ ರೀತಿಯ ವ್ಯವಸ್ಥೆಗಳು ಕರ್ನಾಟಕದಲ್ಲಿ ಅನುಷ್ಟಾನಗೊಂಡರೆ ಮಾತ್ರ ಮುಂದೆ ಭತ್ತದ ಕೃಷಿಯನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಹಾಗಾಗಿ ರಾಜ್ಯ ಸರ್ಕಾರ ಕೃಷಿ ಇಲಾಖೆಯ ಮೂಲಕ ಕೇರಳ ಮಾದರಿಯಲ್ಲಿ ರೈತರ ಸಹಾಯಕ್ಕೆ ಮುಂದಾಗಬೇಕು-
ಧನಂಜಯ ಗೌಡ ಪಿ ಕೃಷಿಕ.
ಮೇಘಾ ಪಾಲೆತ್ತಾಡಿ



























