
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.05- ಟೀ ನರಸೀಪುರ ತಾಲೂಕಿನ ತಲಕಾಡಿನ ಹಳೇಬೀದಿಯ ಹಸ್ತಿಕೇರಿ ಮಠದಿಂದ ವತಿಯಿಂದ ನಡೆದ ಲೋಕಾರ್ಥ ಇಷ್ಟಲಿಂಗ ಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿಮವದ್, ಕೇದಾರನಾಥ ಜಗದ್ಗುರು ವೈರಾಕ್ಯ ಸಿಂಹಾಸಾನಧೀಶ್ವರ 108 ಜಗದ್ಗುರು ರಾವಲ್ ಭೀಮಾಶಂಕರ ಲಿಂಗ ಶಿವಾಚಾರ್ಯ ಭಗತಾದ್ಪರರಿಗೆ ಚಾಮರಾಜನಗರ ವೀರಶೈವ ಸಮಾಜ ಹಾಗೂ ಪಾರ್ವತಿ ಬಳಗದವರು ಜಿಲ್ಲೆಯ ಭಕ್ತಾಧಿಗಳ ಪರವಾಗಿ ಗೌರವ ಸಮರ್ಪಣೆ ಮಾಡಿದರು.
ಇಷ್ಟಲಿಂಗ ಪೂಜೆಯನ್ನು ನೆರವೇರಿಸಿ, ನಂತರ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಇತ್ತೀಚಿನ ದಿನಗಳಲ್ಲಿ ಪ್ರಕೃತಿ ಮುನಿದು ವಿಶ್ವದ ನಾನಾಕಡೆ ಅತಿವೃಷ್ಟ, ಅನಾವೃಷ್ಟಿ ಜಲಾಪ್ರಳಯ, ಯುದ್ದ ಭೀತಿ, ಕಾಳ್ಗಿಚ್ಚು, ಚಂಡಮಾರುತ, ಪ್ರವಾಹ ಭೂಕಂಪ, ಅಗ್ನಿ ಅವಘಡಗಳು ರೋಗಿರುಜಿನಗಳು ಅಕಾಲಿಕ ಮರಣಗಳು ನಡೆಯುತ್ತಿದ್ದು, ಇದಕ್ಕೆ ಪರಿಹಾರಗಳಂದರೆ, ಪ್ರಾರ್ಥನೆ, ಪೂಜೆ, ಪಾರಾಯಾಣ, ಯಜ್ಞಾಯಾದಿಗಳು, ದಾನ, ಧರ್ಮಗಳನ್ನು ಮಾಡಬೇಕಾಗುತ್ತದೆ.
ಎಲ್ಲಾ ದರ್ಮಗಳಲ್ಲಿಯು ಪ್ರಾರ್ಥನೆಗೆ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಆದೇ ರೀತಿ ಹಿಂದು ಧರ್ಮದಲ್ಲಿ ಪ್ರಾರ್ಥನೆ, ಭಜನೆ, ಪಾರಾಯಾಣ ನಡೆಸಲಾಗುತ್ತದೆ. ಅದರಲ್ಲಿ ಸಾಮೂಹಿಕ ಪ್ರಾರ್ಥನೆಯು ಅತ್ಯಂತ ಶಕ್ತಿಯಿಂದ ಕೂಡಿರುತ್ತದೆ. ಎಲ್ಲಿ ನೋಡಿದರು ಮಾನವ ಮನುಷ್ಯತ್ವವನ್ನು ಬಿಟ್ಟು ರಾಕ್ಷಸ ಪ್ರವೃತ್ತಿಗೆ ಸಾಗುತ್ತಿದ್ದಾನೆ. ದ್ವೇಷ, ದರ್ಪ, ದುರ್ಬುದ್ಧಿ, ಅತಿ ಆಸೆ, ಎಲ್ಲೆಲ್ಲೂ ಮೋಸ ವಂಚನೆ, ಅನ್ಯಾಯ, ಕೊಲೆ, ವಿರೋಧ ವಂಚನೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದ ಮುಕ್ತ ಹೊಂದಲು ಇಷ್ಟಲಿಂಗ ಪೂಜೆ ಹಾಗು ಧ್ಯಾನ, ಯೋಗ ಮತ್ತು ವಿಭೂತಿ, ರುದ್ರಾಕ್ಷಿಧಾರಣೆ ಪ್ರಮುಖವಾಗಿದೆ. ಇವೆಲ್ಲವು ಶಿವನ ರಕ್ಷಣೆ ಸಂಕೇತವಾಗಿದ್ದು, ಸಮಾಜದ ಬಾಂಧವರು ವೀರಶೈವ ಧರ್ಮವನ್ನು ಪಾಲನೆ ಮಾಡುವ ಉತ್ತಮ ಸಮಾಜವನ್ನು ನಿರ್ಮಾಣ ಮಾಡಿ, ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಸಂಸ್ಕಾರ, ಗುರು ಪರಂಪರೆಯನ್ನು ಕಲಿಸಿ, ಇಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವ ಜನಾಂಗ ಹೆಚ್ಚು ಭಾಗವಹಿಸುವಂತೆ ಮಾಡಿ, ಅವರನ್ನು ಧರ್ಮದ ಹಾದಿಯಲ್ಲಿ ಮುನ್ನಡೆಸಲು ಶ್ರಮಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಲಕಾಡಿನ ಹಸ್ತಿಕೆರೆ ಮಠಾಧ್ಯಕ್ಷರಾದ ಡಾ. ಶ್ರೀಸಿದ್ದ ಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು. ಪುರಿಗಾಲಿ ಮಠಾಧ್ಯಕ್ಷರಾದ ಶ್ರೀ ಶಿವನಾಂದ ಶಿವಾಚಾರ್ಯಸ್ವಾಮೀಜಿ, ಹರಗುರು ಚರಮೂರ್ತಿಗಳು ಹಾಗೂ ತಲಕಾಡು ಮತ್ತು ಮೈಸೂರು ಜಿಲ್ಲೆ ಹಿರಿಯ ಭಕ್ತಾಧಿಗಳು ಹಾಗೂ ಚಾಮರಾಜನಗರ ಜಿಲ್ಲೆಯ ವೀರಶೈವ ಸಮಾಜದ ಹಿರಿಯ ಮುಖಂಡ ಎಲ್. ಸುರೇಶ್, ಮಿಠಾಯಿ ಮಹೇಶ್, ನಾಗೇಶ್, ಪಾರ್ವತಿ ಬಳಗದ ಆಶಾ ರವೀಶ್, ರಾಣಿಮಹೇಶ್, ಲತಾಶಶಿಧರ್, ರಾಜೇಶ್ವರಿ, ಭಾರತಿ, ಮಂಜುಳಾ, ಸವಿತಾ, ವಸಂತ, ಲತಾ, ಶಶಿರೇಖಾ ಮೊದಲಾದವರು ಇದ್ದರು.