
ಸಂಜೆವಾಣಿ ನ್ಯೂಸ್
ಮೈಸೂರು: ಫೆ.02:- ನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಶಪಡಿಸಿಕೊಳ್ಳಲಾಗದೆ ಎನ್ನಲಾದ ವಸ್ತುಗಳನ್ನು ಕುರಿತು ಎನ್‍ಸಿಬಿಯೂ ಘನ ನ್ಯಾಯಾಲಯಕ್ಕೆ ಕೊಟ್ಟಿರುವ ಅಫಿಡೇವಿಟ್ ಬೇರೆ. ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಬೇರೆಯಾಗಿದ್ದೂ, ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಿ, ಬಿಜೆಪಿ ಎಜೆಂಟ್ ರೀತಿ ವರ್ತಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ನಗರದ ಇಂದಿರಾ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ(ಎನ್‍ಸಿಬಿ) ಕೂಡ ಬಿಜೆಪಿಯ ಏಜೆಂಟ್ ರೀತಿ ವರ್ತಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಮೈಸೂರನ್ನೇ ಗುರಿಯಾಗಿಟ್ಟುಕೊಂಡು ಡ್ರಗ್ಸ್ ತಯಾರಿಕಾ ಘಟಕ ನಡೆಯುತ್ತಿವೆ ಎಂದು ಷಡ್ಯಂತ ಮಾಡುತ್ತಿದ್ದಾರೆ ಎಂದರು.
ಫ್ಯಾಕ್ಟರಿಯ ಮಾಲೀಕ ಗಣಪತ್ ಲಾಲ್ ಎಂಬುವರನ್ನು ಹೆಚ್ಚಿನ ವಿಚಾರಣೆಗೆ ತನ್ನ ವಶಕ್ಕೆ ನೀಡಬೇಕು ಎಂದು ಎನ್‍ಸಿಬಿಯು ಮೈಸೂರಿನ ಮೂರನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಸಂದರ್ಭದಲ್ಲಿ ಘನ ನ್ಯಾಯಾಲಯಕ್ಕೆ ನೀಡಿರುವ ಅಫಿಡೇವಿಟ್‍ನಲ್ಲಿ 41.218 ಕೆಜಿ ಕ್ರಿಸ್ಟಲಿನ್ ವಶ ಪಡಿಸಿಕೊಂಡಿದ್ದೇವೆ. ಅಲ್ಲದೇ ಮೆಫೆಡ್ರಾನ್‍ಗೆ ಬದಲಿಯಾಗಿ ಬಳಕೆ ಮಾಡಲಾಗುತ್ತದೆ ಎನ್ನುವ ಶಂಕೆಯ ಮೇರೆಗೆ 1.28 ಕೆಜಿ ಕ್ರಿಸ್ಟಲ್ ಪೌಡರ್ ವಶಕ್ಕೆ ತಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಕ್ರಿಸ್ಟಲಿನ್ ಎನ್ನುವ ವಸ್ತುವನ್ನು ಸೆಮಿಕಂಡಕ್ಟರ್ ತಯಾರಿಕೆ, ಮೈಕ್ರೋಚಿಪ್ ತಯಾರಿಕೆ ಸೋಲಾರ್ ಸೆಲ್‍ಗಳ ತಯಾರಿಕೆಯಲ್ಲಿ ಸಾಮಗ್ರಿಯಾಗಿ ಉಪಯೋಗಿಸಲಾಗುತ್ತದೆ ಎನ್ನುವ ಪ್ರಾಥಮಿಕ ಮಾಹಿತಿ ಎಲ್ಲರಿಗೂ ಸಿಗುತ್ತದೆ. ಆದರೆ ಇದನ್ನು ಮುಚ್ಚಿಟ್ಟು ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಬಿಜೆಪಿಯವರು ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಎನ್‍ಸಿಬಿಯೂ ಕೋರ್ಟ್ ಗೆ ನೀಡಿರುವ ಅಫಿಡೇವಿಟ್ ನಲ್ಲಿ ಎಲ್ಲಿಯೂ ಮೈಸೂರಿನಲ್ಲಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಲ್ಲ. ಆದರೆ, ಪತ್ರಿಕಾ ಪ್ರಕಟಣೆಯಲ್ಲಿ ಮಾತ್ರ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನಾ ಘಟಕ ನಡೆಸುತ್ತಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎನ್‍ಸಿಬಿ ಅಧಿಕಾರಿಗಳು ಇಲ್ಲಿನ ರಾಸಾಯನಿಕ ಉತ್ಪಾದನಾ ಕೈಗಾರಿಕೆ ಮೇಲೆ ದಾಳಿ ನಡೆಸಿ, ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ರಾಸಾಯನಿಕಗಳನ್ನು ತಯಾರಿಸುವ ಸೋಗಿನಲ್ಲಿ ಮಾದಕ ದ್ರವ್ಯ ತಯಾರಿಸುತ್ತಿದ್ದ ಶಂಕೆ ಮೇಲೆ ಸುಮಾರು500 ಕೆಜಿ ರಾಸಾಯನಿಕವನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಮೈಸೂರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದರಿಂದ ಸುಳ್ಳು: ಈ ಪ್ರತಿಕಾ ಪಕ್ರಟಣೆಯನ್ನು ಇಟ್ಟುಕೊಂಡು ಮೈಸೂರು ಸಂಸದರಿಗೆ ತಲೆಬುಡ ಗೊತ್ತಿಲ್ಲದೇ ಸುಳ್ಳು ಮಾಹಿತಿ ನೀಡುತ್ತಾರೆ. ಅವರ ಹಿರಿಯರು ಮೈಸೂರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಮರ್ಯಾದೆಯನ್ನು ಇವರು ಕಳೆಯುತ್ತಾರೆ. ಇವರು ಬಂದ ನಂತರ ಮೈಸೂರು-ಕೊಡಗಿಗೆ ಬಂದ ಕುಶಾಲನಗರ ರೈಲ್ವೆ ಯೋಜನೆ, ಪ್ರಸಾದ್ ಯೋಜನೆ, ಯೂನಿಟಿ ಮಾಲ್ ಸೇರಿದಂತೆ ಅನೇಕ ಯೋಜನೆಗಳು ಸ್ಥಗಿತಗೊಂಡಿವೆ. ಡ್ರಗ್ ಹಬ್ ಇರುವುದು ಉತ್ತರ ಭಾರತದಲ್ಲಿ. ಆದರೆ ಮೈಸೂರು ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದಿನ ಎಂಪಿಗಿಂತ ಇವರು ಸುಳ್ಳು ಹೇಳುವುದರಲ್ಲಿ ಮುಂದೆ ಸಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮು, ಮುಖಂಡರಾದ ಗಿರೀಶ್, ಜಿಲ್ಲಾ ಕಾಂಗ್ರೆಸ್ ಮಾದ್ಯಮ ವಕ್ತಾರ ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.


























