Home ಜಿಲ್ಲೆ ಮೈಸೂರು ಕೇಂದ್ರದಿಂದ ರೈತರನ್ನು ಕಡೆಗಣಿಸಿ ವಾಣಿಜ್ಯ ಒಪ್ಪಂದ

ಕೇಂದ್ರದಿಂದ ರೈತರನ್ನು ಕಡೆಗಣಿಸಿ ವಾಣಿಜ್ಯ ಒಪ್ಪಂದ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.28:-
ಕೇಂದ್ರ ಸರ್ಕಾರ ಜಾಗತಿಕ ರಾಜಕೀಯ ಶಕ್ತಿಗಳಿಗೆ ಶರಣಾಗತವಾದ್ದು, ಭಾರತೀಯ ರೈತರನ್ನು ಕಡೆಗಣಿಸಿ ಅಂತರಾಷ್ಟ್ರೀಯ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಕೇರಳದ ಜೈವ ಕರ್ಷಕ ಸಮಿತಿ ಅಧ್ಯಕ್ಷ ವಿಶಾಲಾಕ್ಷನ್ ಕಳವಳ ವ್ಯಕ್ತಪಡಿಸಿದರು.


ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿ ಕೂಟ (ಆಶಾ) ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಕಿಸಾನ್ ಸ್ವರಾಜ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಕುಲಾಂತರಿ ಬೀಜಗಳಿಂದ ಬೆಳೆ, ಬೀಜ ಮಸೂದೆ, ಅಮೆರಿಕ ವ್ಯಾಪಾರ ಒಪ್ಪಂದ ಸೇರಿದಂತೆ ಎಲ್ಲ ನಿರ್ಧಾರಗಳಲ್ಲಿಯೂ ರೈತ ಸಂಘಟನೆಗಳನ್ನು ಒಳಗೊಂಡಿಲ್ಲ ಎಂದು ದೂರಿದರು.
ಮಾಲಿನ್ಯ ರಹಿತ ನೈಸರ್ಗಿಕ ಸಾವಯವ ಕೃಷಿಯ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ದೊಡ್ಡದಾಗಿ ಮಾತನಾಡುವ ಸರ್ಕಾರಗಳು ಸಂಸತ್ತು, ವಿಧಾನ ಮಂಡಲಗಳಲ್ಲಿ ರೈತ ಪರವಾಗಿ ನೀತಿ ನಿಯಮಗಳನ್ನು ರೂಪಿಸುತ್ತಿಲ್ಲ. ಬಂಡವಾಳಶಾಹಿಗಳ ಪರವಾಗಿ ನಡೆದುಕೊಳ್ಳುತ್ತಿವೆ ಎಂದರು.


ವಿಶ್ವಸಂಸ್ಥೆಯ ಈಕ್ವೇಟರ್ ಪ್ರಶಸ್ತಿ ಪುರಸ್ಕೃತ ಧಾರವಾಡದ ಬೀಬಿ ಫಾತಿಮ ಮಹಿಳಾ ಸ್ವ ಸಹಾಯ ಸಂಘದ ಬೀಬಿ ಜಾನ್ ಮಾತನಾಡಿ, ಸಿರಿಧಾನ್ಯ ಬೆಳೆಗಳಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿ ಪೆÇ್ರೀತ್ಸಾಹಿಸಬೇಕು ಎಂದು ಹೇಳಿದರು.


ಸಿರಿಧಾನ್ಯ ಬೆಳೆಯಲು ರೈತರಿಗೆ ಬೀಜ ಬ್ಯಾಂಕ್ ಮೂಲಕ ಬೀಜಗಳ ಕಿಟ್‍ಗಳನ್ನು ನೀಡುತ್ತಿದ್ದೇವೆ. ರೈತರು ಬೆಳೆದ ಸಿರಿಧಾನ್ಯಗಳನ್ನು ಖರೀದಿ ಮಾಡಲು ಸಹ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಿರಿಧಾನ್ಯ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರದ ಬೆಂಬಲವೂ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ರೈತರು ಆಹಾರ ಭದ್ರತೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಆಹಾರ ಭದ್ರತೆ ಆಗಬೇಕಾದರೆ ಬೀಜ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ದೇಸಿ ಬೀಜಗಳನ್ನು ಸಂರಕ್ಷಣೆ ಮಾಡಲು ಮಹಿಳೆಯರು ಹೆಚ್ಚಿನ ಆಸಕ್ತಿ ತೋರಬೇಕು. ದೇಸಿ ಬೀಜಗಳನ್ನು ಕಳೆದುಕೊಂಡರೆ ಮತ್ತೆ ತರುವುದು ಕಷ್ಟ. ಕೃಷಿ ಕೆಲಸದಲ್ಲಿ ಮಹಿಳೆಯರು ಪುರುಷರ ಜತೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಮೇಳಕ್ಕೆ ಚಾಲನೆ: ಇದಕ್ಕೂ ಮೊದಲು ಮೇಳಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಶರಣಪ್ಪ ವಿ.ಹಲಸೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭ ಆಹಾರಕ್ಕೆ ಪರದಾಡುವ ಪರಿಸ್ಥಿತಿ ಇತ್ತು. ದೇಶದ ಜನರ ಹಸಿವು ನೀಗಿಸಲು ಹಸಿರು ಕ್ರಾಂತಿ ಪ್ರಾರಂಭಿಸಲಾಯಿತು. ಹಸಿರು ಕ್ರಾಂತಿಯಿಂದ ಹಸಿವು ನೀಗಿದರೂ ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮಗಳು ಬೀರಲು ಪ್ರಾರಂಭವಾಗಿದೆ. ಹಾಗಾಗಿ ಜನರ ಆರೋಗ್ಯ ಕಾಪಾಡಲು ಕೃಷಿಕರು ಸಾವಯವ ಕೃಷಿಯತ್ತ ಮುಖ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.


ರೈತರು ಕೃಷಿ ಚಟುವಟಿಕೆ ಕೈಗೊಳ್ಳದೆ ಇದ್ದರೆ ಜನರು ಬದುಕುಳಿಯಲು ಸಾಧ್ಯವಿಲ್ಲ. ಹಾಗಾಗಿ ಕೃಷಿ ಚಟುವಟಿಕೆಗಳಿಗೆ ಸರ್ಕಾರದ ಉತ್ತೇಜನ ಅಗತ್ಯವಿದೆ. ರೈತರ ಕಷ್ಟಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಸರ್ಕಾರ ರೈತರಿಗೆ ಅಗತ್ಯ ಬೆಂಬಲ ಬೆಲೆ ನೀಡುವ ಮೂಲಕ ಪೆÇ್ರೀತ್ಸಾಹ ನೀಡಬೇಕು. ರೈತರ ಸಮಸ್ಯೆಗಳನ್ನು ತಳಮಟ್ಟದಿಂದ ಅಧ್ಯಯನ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಹೇಳಿದರು.


ಆಶಾ ಸಂಸ್ಥೆಯ ಕಪಿಲ್ ಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈದರಾಬಾದ್‍ನ ಸುಸ್ಥಿರ ಕೃಷಿ ಕೇಂದ್ರದ ಜಿ.ವಿ.ರಾಮಾಂಜನೇಯಲು, ಕೆಎಸ್‍ಒಯು ಕುಲಸಚಿವರಾದ ಸಿ.ಎಸ್.ಆನಂದ್ ಕುಮಾರ್, ಪೆÇ್ರ. ಎಸ್.ಕೆ.ನವೀನ್‍ಕುಮಾರ್, ಡೀನ್ ರಾಮನಾಥಂನಾಯ್ಡು,ಸಮ್ಮೇಳನ ಸಂಚಾಲಕಿ ಕವಿತಾ ಕುರುಗಂಟಿ, ನಿರಂಜನ್, ಚಂದ್ರೇಗೌಡ, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ರಾಮಚಂದ್ರಪ್ಪ, ಕವಿತಾ ಶ್ರೀನಿವಾಸ್, ಪ್ರಸಾರಾಂಗ ನಿರ್ದೇಶಕ ಆರ್. ಸಂತೋಷ್ ನಾಯಕ್ ಪಾಲ್ಗೊಂಡಿದ್ದರು.
11 ರಾಜ್ಯಗಳಿಂದ ಬಂದಿದ್ದ ನೂರಾರು ಸಾವಯವ ಕೃಷಿಕರು ಭಾಗವಹಿಸಿರುವ ಸಮ್ಮೇಳನದಲ್ಲಿ ಬೀಜ ಉತ್ಸವ, ಸಾಕ್ಷ್ಯಚಿತ್ರ ಪ್ರದರ್ಶನ, ಕೃಷಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.