ಪುತ್ತೂರು: ೫ ದಿನದ ಹಿಂದೆ ಹಾಡಹಗಲೇ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಮನೆಯ ಬಾಗಿಲು ಮರಿದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಸಂಪ್ಯ ಠಾಣಾ ಪೊಲೀಸರು ಬಂಧಿಸಿ, ಕಳ್ಳತನವಾಗಿದ್ದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಂಡ್ಯ ದಿ. ನಾರಾಯಣ ನಾಯ್ಕ ಅವರ ಪುತ್ರ ದಯಾನಂದ ನಾಯ್ಕ ಎಂ. (೨೯) ಬಂಧಿತ ಆರೋಪಿ. ಈಶ್ವರಮಂಗಲ ಪೇಟೆಯ ನಿವಾಸಿ ಶೋಭಾ ಕೃಷ್ಣರಾಯ ಅವರ ಮನೆಯಿಂದ ಆ. ೧೨ರಂದು ಬೆಳಗ್ಗೆ ೧೧ ಗಂಟೆಯಿಂದ ಸಂಜೆ ೭ ಗಂಟೆಯ ಮಧ್ಯದಲ್ಲಿ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಮನೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಕಪಾಟಿನ ಬೀಗ ಮುರಿದು ಸುಮಾರು ೩೧ ಗ್ರಾಂ. ಬಂಗಾರ ಮತ್ತು ರೂ. ೫೦೦೦ ನಗದು ಕಳ್ಳತನ ಮಾಡಿದ್ದ. ಪೊಲೀಸ್ ನಿರೀಕ್ಷಕ ರವಿ ಬಿ. ಎಸ್. ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ತಂಡ ಪ್ರಕರಣದ ತನಿಖೆ ಕೈಗೊಂಡು ಆ. ೧೭ರಂದು ಈಶ್ವರಮಂಗಲದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯಿಂದ ೩೦.೦೨೦ ಗ್ರಾಂ. ಬಂಗಾರ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಪತ್ತೆ ಮಾಡುವಲ್ಲಿ ಎಎಸ್‌ಐ ಚಂದ್ರಶೇಖರ್, ಸಿಬ್ಬಂದಿ ಪ್ರವೀಣ್, ಮಧು, ಹರೀಶ್, ಸುಬ್ರಹ್ಮಣ್ಣ ಆಕಾಶ್, ಯುವರಾಜ್, ಶರಣಪ್ಪ ಪಾಟೀಲ್, ಚಾಲಕರಾದ ಎ.ಆರ್.ಎಸ್.ಐ. ಯಜ್ಞ, ಹರಿಪ್ರಸಾದ್ ಮತ್ತು ನಿತೇಶ್ ಸಹಕರಿಸಿದ್ದರು.
ಕೆಲಸ ಇಲ್ಲದೆ ಕಳ್ಳನಾದ..!
ಬಂಧಿತ ಆರೋಪಿ ದಯಾನಂದ ನಾಯ್ಕ ಕೆಂಪು ಕಲ್ಲಿನ ಲೋಡಿಂಗ್ ಕೆಲಸ ಮಾಡುತ್ತಿದ್ದ. ಅದರಲ್ಲಿ ಉತ್ತಮ ಸಂಪಾದನೆ ಮಾಡುತ್ತಿದ್ದ. ಆತ ವಿವಿಧ ಸಂಘ ಸಂಸ್ಥೆಗಳಿಂದ ಸಾಲ ಪಡೆದುಕೊಂಡಿದ್ದ. ಆದರೆ ಕಳೆದ ಮೂರು ತಿಂಗಳಿನಿಂದ ಕೆಲಸವಿಲ್ಲದ ಕಾರಣಕ್ಕೆ ಕಂಗೆಟ್ಟು ಕಳ್ಳತನಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.

























