ಕೆನಡಾದ ಕ್ಯಾಲ್ಗರಿಯಲ್ಲಿ ಭಾರತದ ೭೯ನೇ ಸ್ವಾತಂತ್ರ್ಯೋತ್ಸವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.17:
ಕೆನಡಾದ ಕ್ಯಾಲ್ಗರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಭಾರತೀಯ ಮೂಲ ನಿವಾಸಿಗರನ್ನು ಪ್ರತಿನಿಧಿಸುವ ವಿವಿಧ ರಾಜ್ಯಗಳ ಸಂಘ ಸಂಸ್ಥೆಗಳ ಒಗ್ಗೂಡುವಿಕೆಯ ಇಂಡಿಯೆ” ಎಂಬ ಒಕ್ಕೂಟದ ನೇತೃತ್ವದಲ್ಲಿ ಭಾರತದ 79ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯನ್ನು 16ನೇ ಆಗಸ್ಟ್ 2025, ರಂದು ಕೆನಡಾದ ಕ್ಯಾಲ್ಗರಿಯಲ್ಲಿ ಆಚರಿಸಲಾಯಿತು. ಕ್ಯಾಲ್ಗರಿ ಮಹಾನಗರದ ಮಹಾಪೌರರಾದ ಜ್ಯೋತಿ ಗೊಂಡಕ್ ಹಾಗೂ ಭಾರತದ ನಿವೃತ್ತ ಸೇನಾಧಿಕಾರಿಗಳ ಪ್ರತಿನಿಧಿಗಳು ಧ್ವಜಾರೋಹಣ ಮಾಡಿದರು.
ಕ್ಯಾಲ್ಗರಿ ನಗರದ ಕೇಂದ್ರ ಸಂಸದ ಗ್ರೇಗ್ ಮ್ಯಾಕ್ ಲೀನ್ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಸೌಹಾರ್ದ ತೆಯನ್ನು ಪ್ರಶಂಸಿದರು. ಸ್ಥಳೀಯ ಶಾಸಕರು, ಮಹಾನಗರಪಾಲಿಕೆಯ ಸದಸ್ಯರು ಭಾಗವಹಿಸಿ ಶುಭ ಹಾರೖಸಿದರು.
ಭಾರತದ ವೈವಿಧ್ಯಮಯ ಸಂಸ್ಕೃತಿ, ಸಾಹಿತ್ಯ, ಸಂಗೀತ ಮತ್ತು ನೆಲ- ಜಲ ದೃಶ್ಯಗಳನ್ನು ಪ್ರತಿಬಿಂಬಿಸುವ ಹಾಗೂ ಆಹಾರ ವಿಹಾರ, ವೇಷ ಭೂಷಣಗಳನ್ನು ಪ್ರಚುರಪಡಿಸುವ ನೃತ್ಯ, ಸಂಗೀತ ಮತ್ತು ಸಮೂಹ ಗಾಯನ ಪ್ರದರ್ಶನ ಏರ್ಪಡಿಸಲಾಗಿತ್ತು.
ಹತ್ತಕ್ಕಿಂತಲೂ ಹೆಚ್ಚಿನ ಮಳಿಗೆಗಳಲ್ಲಿ ಭಾರತದ ವಿಶಿಷ್ಟ ಶೖಲಿಯ ಪಾಕ ಪದ್ಧತಿ, ಸಾಂಪ್ರದಾಯಿಕ ಕರಕುಶಲ ವಸ್ತುಗಳು, ವರ್ಣ ಚಿತ್ರಗಳು, ಕಲಾ ಕೃತಿಗಳು ಮತ್ತು ಉಡುಗೆ ತೊಡುಗೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸುಮಾರು 20ಕ್ಕಿಂತಲೂ ಹೆಚ್ಚಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕ್ಯಾಲ್ಗರಿಯಲ್ಲಿ ವಾಸಿಸುತ್ತಿರುವ 5000 ಕ್ಕಿಂತಲೂ ಹೆಚ್ಚಿನ ಜನರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಳ್ಳಾರಿಯ ಡಾ. ಬಸವರಾಜ ಗದಗಿನ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.