Home ಜಿಲ್ಲೆ ಮಂಗಳೂರು ಕೆಎಫ್‌ಡಿಸಿ ಇಲಾಖೆಯಿಂದ ರೈನ್ ಗಾರ್ಡ್ ಬಾರದ ಹಿನ್ನೆಲೆಯಲ್ಲಿ ಕಾರ್ಮಿಕರ ದಿಢೀರ್ ಪ್ರತಿಭಟನೆ

ಕೆಎಫ್‌ಡಿಸಿ ಇಲಾಖೆಯಿಂದ ರೈನ್ ಗಾರ್ಡ್ ಬಾರದ ಹಿನ್ನೆಲೆಯಲ್ಲಿ ಕಾರ್ಮಿಕರ ದಿಢೀರ್ ಪ್ರತಿಭಟನೆ

ಕಾರ್ಮಿಕ ಸಂಘಟನೆಗಳ ಆಕ್ರೋಶ – ಅಧಿಕಾರಿಗಳಿಂದ ಸರಿಪಡಿಸಿ ಕೊಡುವ ಭರವಸೆ
ಸುಳ್ಯ:ಮುಂಗಾರು ಮಳೆ ಆರಂಭಗೊಂಡಿದ್ದು, ಈವರೆಗೆ ಇಲಾಖೆಯ ವತಿಯಿಂದ ರೈನ್ ಗಾರ್ಡ್ ಸಾಮಾಗ್ರಿಗಳು ಬರಲಿಲ್ಲ ಎಂಬ ಆರೋಪಿಸಿ ಸುಮಾರು ೫೦ಕ್ಕೂ ಹೆಚ್ಚು ಕಾರ್ಮಿಕರು ಕೆಲಸಕ್ಕೆ ಹೋಗದೆ ದಿಢೀರ್ ಪ್ರತಿಭಟನೆಗಿಳಿದ ಘಟನೆ ನಾಗಪಟ್ಟಣದ ಕೆಎಫ್‌ಡಿಸಿ ರಬ್ಬರ್ ಶೇಖರಣ ಕೇಂದ್ರದಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ ಸುಳ್ಯ ತಾಲೂಕಿನಲ್ಲಿ ನಿರಂತರ ಬರುತ್ತಿರುವ ಮಳೆಯಿಂದಾಗಿ ರಬ್ಬರ್ ಮರಗಳು ಸಂಪೂರ್ಣ ಒದ್ದೆಯಾಗಿದ್ದು ಮರಗಳಿಗೆ ಇನ್ನೂ ಪ್ಲಾಸ್ಟಿಕ್ ಅಳವಡಿಸಿರುವುದಿಲ್ಲ. ಅಲ್ಲದೆ ಇದಕ್ಕೆ ಬೇಕಾದಂತಹ ಪ್ಲಾಸ್ಟಿಕ್, ಸ್ಟಪ್ಲರ್ ಮುಂತಾದ ಸಾಮಗ್ರಿಗಳು ಇನ್ನೂ ಇಲಾಖೆಯ ವತಿಯಿಂದ ಬಾರದೇ ಇದ್ದು ಕಾರ್ಮಿಕರಿಗೆ ಕೆಲಸಕ್ಕೆ ಅನಾನುಕೂಲವಾಗಿದೆ. ಅಲ್ಲದೆ ಕಾರ್ಮಿಕರಿಗೆ ನೀಡಿರುವ ಅಗ್ರಿಮೆಂಟ್ ವಿರೋಧವಾಗಿ ರಬ್ಬರ್ ತೋಟದ ಕಾಡು ಕಡೆಯುವ ಕೆಲಸವನ್ನು ಕಾರ್ಮಿಕರಿಗೆ ನೀಡುತ್ತಿದ್ದಾರೆ. ಇದನ್ನು ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ಕಾರ್ಮಿಕರು ಪ್ರತಿಭಟನೆ ನಡೆಸಿದರು
ಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಜೀವರತ್ನ, ಶರತ್, ಶಶಿಕುಮಾರ್, ಕ್ರೂಸ್ ಮೊದಲಾದವರು ಪ್ರತಿಭಟನಾ ಸ್ಥಳಕ್ಕೆ ತರಳಿ ಇಲಾಖಾಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ‘ಮಳೆಗಾಲ ಆರಂಭವಾಗುವ ಎರಡು ತಿಂಗಳು ಮೊದಲೇ ಇಲಾಖೆಯವರು ರೈನ್ ಗಾರ್ಡ್ ವ್ಯವಸ್ಥೆಯನ್ನು ಮಾಡಿಕೊಡಬೇಕಾಗಿತ್ತು. ಆದರೆ ಇದೀಗ ಮುಂಗಾರು ಮಳೆ ಆರಂಭಗೊಂಡಿದ್ದು ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಬರುತ್ತಿದೆ. ಇದರಿಂದಾಗಿ ಮರಗಳು ಸಂಪೂರ್ಣ ನೆನೆದಿದ್ದು, ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಸಮಸ್ಯೆಯಾಗುತ್ತಿದೆ. ಇದನ್ನು ಇಲಾಖಾಧಿಕಾರಿಗಳೊಂದಿಗೆ ಪ್ರಶ್ನಿಸಿದಾಗ ಸಾಮಗ್ರಿಗಳು ಬರುವವರೆಗೆ ಕಾರ್ಮಿಕರು ರಬ್ಬರ್ ತೋಟದ ಕಾಡು ಕಡೆಯುವ ಕೆಲಸವನ್ನು ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೆಲ್ಲ ಇಲಾಖೆಯ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸ್ಥಳಕ್ಕೆ ಬಂದ ನಿಗಮದ ಡಿ.ಎಂ ರವರು ಕಾರ್ಮಿಕರ ಅಹವಾಲುಗಳನ್ನು ಕೇಳಿ ತಾಲೂಕಿನ ಕೆಲವು ಸ್ಥಳೀಯ ರಬ್ಬರ್ ಶೇಖರಣ ಕೇಂದ್ರಗಳಿಂದ ಮಳೆಗಾಲಕ್ಕೆ ಬೇಕಾದ ಕೆಲವು ಸಾಮಾಗ್ರಿಗಳನ್ನು ತಂದಿದ್ದೇವೆ. ಅದನ್ನು ಎರಡು ಮೂರು ದಿನಗಳಲ್ಲಿ ಸರಿಪಡಿಸುವ ಕಾರ್ಯ ನಡೆಯುತ್ತದೆ. ಆದ್ದರಿಂದ ಕಾರ್ಮಿಕರು ಯಾವುದೇ ಗೊಂದಲಕ್ಕೀಡಾಗದೆ ಇಲಾಖೆಯೊಂದಿಗೆ ಶಾಂತಿಯುತವಾಗಿ ವರ್ತಿಸಿ ಪರಸ್ಪರ ಒಂದಾಗಿ ಈ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಕಾರ್ಯವನ್ನು ಮಾಡಿಕೊಳ್ಳೋಣ. ಅಲ್ಲದೆ ಇಲಾಖೆ ಮತ್ತು ಕಾರ್ಮಿಕರು ಒಬ್ಬರೊನ್ನೊಬ್ಬರು ಅರ್ಥೈಸಿಕೊಂಡು ಒಟ್ಟಾಗಿ ಈ ಸಮಸ್ಯೆಯನ್ನು ಬಗೆ ಹರಿಸಿಕೊಂಡು ನಮ್ಮ ನಮ್ಮ ಜವಾಬ್ದಾರಿಯುತ ಕೆಲಸವನ್ನು ಮಾಡೋಣ. ಇದಕ್ಕಾಗಿ ಕಾರ್ಮಿಕರು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಅಲ್ಲದೆ ಜೂನ್ ೪ರಂದು ಕಾರ್ಮಿಕ ಸಂಘಟನೆಗಳ ಮತ್ತು ಅಧಿಕಾರಿಗಳ ಸಭೆಯನ್ನು ಕರೆದು ಒಂದು ಒಮ್ಮತದ ನಿರ್ಣಯ ಕೈಗೊಳ್ಳೋಣ ಎಂದು ಭರವಸೆಯನ್ನು ನೀಡಿದರು. ಅಲ್ಲದೆ ಕೆಲಸಕ್ಕೆ ರಜೆ ಹಾಕಿ ವೇತನ ಕೇಳಿದರೆ ಅದನ್ನು ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಕಾಡು ಕಡಿಯುವ ಕೆಲಸಕ್ಕೆ ಕಾರ್ಮಿಕರು ಕೈಜೋಡಿಸಬೇಕೆಂದು ವಿನಂತಿಸಿಕೊಂಡರು. ಜೂನ್ ೪ ರಂದು ಬುಧವಾರ ಕಾರ್ಮಿಕ ಸಂಘಟನೆಗಳ ಮತ್ತು ಅಧಿಕಾರಿಗಳ ಸಭೆ ನಡೆಯಲಿದೆ.
ಫೋಟೋ
೪ಎಸ್‌ಯುಎಲ್-ಕೆಎಫ್‌ಡಿಸಿ