
ಕೌಟುಂಬಿಕ ಭಾವನೆಗಳು, ಮುದ್ದಾದ ಪ್ರೀತಿ ಮತ್ತು ತಂದೆ–ಮಗಳ ಬಂಧದ ತೀವ್ರತೆಯನ್ನು ಒಂದೇ ಹಂದರದಲ್ಲಿ ಮೂಡಿಸುತ್ತಿರುವ ಹೊಸ ಧಾರಾವಾಹಿ ‘ಕೃಷ್ಣವಂಶಿ’ ಇದೀಗ ನಿಮ್ಮ ಮನಸೆಳೆಯಲು ರಂಗೇರಿದೆ. ಮನಸ್ಸು ಮುಟ್ಟುವ ಪ್ರೇಮಕಥೆ, ಕುಟುಂಬದ ಮೌಲ್ಯಗಳ ಹೋರಾಟ ಮತ್ತು ಕನಸುಗಳ ಸಂಘರ್ಷದಲ್ಲಿ ಈ ಕಥೆ ಬರಲಿದೆ.
ಉದಯ ಟಿವಿ ಯಲ್ಲಿ ಮಾರ್ಚ್ 2 ರಿಂದ ಪ್ರತಿದಿನ ರಾತ್ರಿ 9:30 ಕ್ಕೆ (ಸೋಮವಾರದಿಂದ ಶನಿವಾರ) ಪ್ರಸಾರವಾಗಲಿರುವ ಈ ಧಾರಾವಾಹಿ, ನಾಚಿಕೆ ಸ್ವಭಾವದ ಕೃಷ್ಣ ಮತ್ತು ವಾಚಾಳಿ, ಚುರುಕು ವಂಶಿಯ ನಡುವಿನ ಸಿಹಿ–ಕಹಿ ಪ್ರೇಮಕಥೆಯನ್ನು ಹೇಳುತ್ತದೆ.
ಕೃಷ್ಣ ಹೆಚ್ಚು ಓದಿಲ್ಲ. ಅಣ್ಣನ ಹೋಟೆಲ್ ನೋಡಿಕೊಳ್ಳುವ ಸರಳ ಹುಡುಗ. ಆದರೆ ಅವನ ನಾಚಿಕೆ, ಮೌನ ಮತ್ತು ಪ್ರಾಮಾಣಿಕತೆಯೇ ವಂಶಿಗೆ ಮನಸೋತ ಗುಣ. ವಂಶಿ ಮಾತಿನ ಮಲ್ಲಿಯಂತೆ ಚುರುಕಾದ ಹುಡುಗಿ. ಇಬ್ಬರ ಮಧ್ಯೆ ಮೂಡುವ ಪ್ರೀತಿ ಮುದ್ದಾದದ್ದೇ ಸರಿ—ಆದರೆ ಅದು ಸುಲಭವಲ್ಲ. ಅನೇಕ ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾದ ಪ್ರೀತಿ ಇದು.
ಕಥೆಯ ಮತ್ತೊಂದು ಬಲವಾದ ಅಂಶ ತಂದೆ–ಮಗಳ ಬಾಂಧವ್ಯ. ದೊರೆಸ್ವಾಮಿಗೆ ತನ್ನ ಮಗಳು ವಂಶಿಯೇ ಪ್ರಪಂಚ. ಮಗಳು ಮದುವೆಯಾಗಿ ದೂರ ಹೋಗುವ ಕಲ್ಪನೆಯೇ ಅವನಿಗೆ ಅಸಹನೀಯ. ಮನೆ ಅಳಿಯನಾಗಲು ಸಿದ್ಧನಾಗಿರುವ ಹುಡುಗನನ್ನೇ ಮಗಳು ಮದುವೆಯಾಗಲಿ ಎನ್ನುವುದು ಅವನ ಕನಸು. ಆದರೆ ವಂಶಿಯ ಕನಸು ವಿಭಿನ್ನ—ಪ್ರೀತಿಯಿಂದ ಕೂಡಿದ ಅವಿಭಕ್ತ ಕುಟುಂಬದಲ್ಲಿ, ಅಪ್ಪನ ಮನೆಯವರ ಜೊತೆಗೆ ಗಂಡನ ಮನೆಯವರನ್ನೂ ಸೇರಿಸಿಕೊಂಡು ಬದುಕುವುದು.
ಹಾಗಾದರೆ…ವಂಶಿಯ ಕನಸು ನನಸಾಗುತ್ತದೆಯೇ? ಕೃಷ್ಣ–ವಂಶಿಯರ ಪ್ರೀತಿ ಎಲ್ಲ ಅಡೆತಡೆಗಳನ್ನು ದಾಟುತ್ತದೆಯೇ?ತಂದೆಯ ಮಮತೆ ಮತ್ತು ಮಗಳ ಕನಸಿನ ನಡುವೆ ಯಾರು ಗೆಲ್ಲುತ್ತಾರೆ?
ನಾಯಕ ಕೃಷ್ಣನಾಗಿ ರೋಹನ್ ಎ., ನಾಯಕಿ ವಂಶಿಯಾಗಿ ಶಾರದಾ ಪುಂಡಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಗಿರಿಜಾ ಲೋಕೇಶ್, ಹನುಮಂತೇಗೌಡ, ಹಂಸ, ವಿಜಯ್, ರಜಿನಿ ಟಿ.ಡಿ., ಸಿದ್ದಾರ್ಥ ಮಾಧ್ಯಮಿಕ, ಸಿಂಧೂ ಪಿ., ಸಂದೀಪ್ ಎಸ್.ಆರ್., ಪುಷ್ಪ ಅನಿಲ್ ಕುಮಾರ್, ಸುಕೃತಾ ನಾಗ್ ಸೇರಿದಂತೆ ಪ್ರಬಲ ತಾರಾಗಣ ಈ ಧಾರಾವಾಹಿಯ ಆಕರ್ಷಣೆ.
ಪರಿಣಿತ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ತೇಜಸ್ವಿನಿ ಭಾಸ್ಕರ್ ಮಂಗಾಡಹಳ್ಳಿ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಸುಬ್ರಹ್ಮಣ್ಯ ಪ್ರಸಾದ್ ನಿರ್ದೇಶನವಿದೆ.



























