Home ಜಿಲ್ಲೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಹೆಚ್ಚಳ ಬಿಜೆಪಿ ರೈತ ಮೂರ್ಚಾ ಉಪಾಧ್ಯಕ್ಷ ಗುರುಲಿಂಗನಗೌಡ ಸ್ವಾಗತ

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಹೆಚ್ಚಳ ಬಿಜೆಪಿ ರೈತ ಮೂರ್ಚಾ ಉಪಾಧ್ಯಕ್ಷ ಗುರುಲಿಂಗನಗೌಡ ಸ್ವಾಗತ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಮೇ.15: ಕೇಂದ್ರ ಸರ್ಕಾರ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಘೋಷಿಸಿರುವ 14 ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವನ್ನು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ  ಗುರುಲಿಂಗನ ಗೌಡ ಸ್ವಾಗತಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರಧಾನಮಂತ್ರಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ರೈತರ ಬದುಕು ಸುಧಾರಿಸಲು ಹಾಗೂ ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿಸಲು ನಿರಂತರವಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.

ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಬೆಂಬಲ ಬೆಲೆ  ದರಗಳಿಂದ ಭತ್ತ, ಜೋಳ, ರಾಗಿ, ಸಜ್ಜೆ, ಮೆಕ್ಕೆಜೋಳ, ತೊಗರಿಬೇಳೆ, ಉದ್ದು, ಹೆಸರಬೇಳೆ, ನೆಲಗಡಲೆ, ಸೂರ್ಯಕಾಂತಿ, ಸೋಯಾಬಿನ್. ಎಳ್ಳು ಹಾಗೂ ಹತ್ತಿ ಬೆಳೆಗಾರರಿಗೆ ನೇರ ಲಾಭವಾಗಲಿದೆ. ವಿಶೇಷವಾಗಿ ತೊಗರಿಬೇಳೆ, ಹೆಸರಬೇಳೆ, ಉದ್ದು ಹಾಗೂ ಎಣ್ಣೆ ಬೀಜಗಳಿಗೆ ಬೆಂಬಲ ಬೆಲೆ  ಹೆಚ್ಚಳ ಘೋಷಿಸಿರುವುದು ರೈತರಲ್ಲಿ ಹೊಸ ವಿಶ್ವಾಸ ಮೂಡಿಸಿದೆ ಎಂದಿದ್ದಾರೆ.

ಕಳೆದ ಹಲವು ವರ್ಷಗಳಿಂದ ಕೇಂದ್ರ ಸರ್ಕಾರ ರೈತರ ಉತ್ಪಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಮೂಲಕ ಭದ್ರ ಆದಾಯ ಒದಗಿಸುವ ಕೆಲಸ ಮಾಡುತ್ತಿದೆ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ  ಸಂಕಲ್ಪವಾಗಿದೆ. ಇದೇ ಕಾರಣಕ್ಕೆ ಕೃಷಿ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ಕೃಷಿ ಉತ್ಪನ್ನಗಳ ಖರೀದಿ ವ್ಯವಸ್ಥೆಯನ್ನೂ ವಿಸ್ತರಿಸಲಾಗುತ್ತಿದೆ. ಭತ್ತ  ₹2441ಕ್ಕೆ ಹಾಗೂ ಗ್ರೇಡ್ ‘ಎ’ ಭತ್ತ ₹2461ಕ್ಕೆ ಹೆಚ್ಚಿಸಿರುವುದು ಅಕ್ಕಿ ಬೆಳೆಗಾರರಿಗೆ ನೆರವಾಗಲಿದೆ. ರಾಗಿ ಬೆಲೆಯನ್ನು ₹5205ಕ್ಕೆ ಏರಿಸಿರುವುದು ಕರ್ನಾಟಕದ ರೈತರಿಗೆ ವಿಶೇಷ ಸಂತಸದ ವಿಚಾರವಾಗಿದೆ. ಪಲ್ಸ್ ಹಾಗೂ ಎಣ್ಣೆ ಬೀಜ ಉತ್ಪಾದನೆಯನ್ನು ಉತ್ತೇಜಿಸಲು ತೊಗರಿಬೇಳೆ ₹8450, ಹೆಸರಬೇಳೆ ₹8780, ಉದ್ದು ₹8200, ಸೋಯಾಬಿನ್ ₹5708, ಸೂರ್ಯಕಾಂತಿ ₹8343 ಹಾಗೂ ಎಳ್ಳು ₹10346 ನಿಗದಿಪಡಿಸಿರುವುದು ದೇಶದ ಕೃಷಿ ಆತ್ಮನಿರ್ಭರತೆಗೆ ಸಹಕಾರಿ ಆಗಲಿದೆ. ಹತ್ತಿ ಬೆಳೆಗಾರರ ಹಿತದೃಷ್ಟಿಯಿಂದ ಮಧ್ಯಮ ಎಳೆಯ ಹತ್ತಿಗೆ ₹8267 ಹಾಗೂ ಉದ್ದ ಎಳೆಯ ಹತ್ತಿಗೆ ₹8667 ಎಂಎಸ್ ಪಿ ಘೋಷಿಸಿರುವುದು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ.

ಕೇಂದ್ರ ಸರ್ಕಾರ ಈಗಾಗಲೇ ಪಿಎಂ-ಕಿಸಾನ್ ಸಮ್ಮಾನ್ ನಿಧಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್, ಸೂಕ್ಷ್ಮ ನೀರಾವರಿ ಯೋಜನೆಗಳು, ರಸಗೊಬ್ಬರ ಸಹಾಯಧನ ಸೇರಿದಂತೆ ಅನೇಕ ಯೋಜನೆಗಳ ಮೂಲಕ ರೈತರ ಅಭಿವೃದ್ಧಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ. ಎಂ ಎಸ್ಹೆ ಪೊ ಚ್ಚಳದ ಈ ನಿರ್ಧಾರ ರೈತರ ಆರ್ಥಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಲಿದೆ ಎಂದಿದ್ದಾರೆ.