ಕೂಂಬಿಂಗ್‍ನಲ್ಲಿ ಪತ್ತೆಯಾಗದ ಹುಲಿಯ ಸುಳಿವು

ಸಂಜೆವಾಣಿ ನ್ಯೂಸ್
ಮೈಸೂರು: ಜ.08:-
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಎರಡು ಬಾರಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಹುಲಿಗಾಗಿ ಹುಲಿಗಾಗಿ ಎರಡು ದಿನ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಹುಲಿ ಸುಳಿವು ಪತ್ತೆಯಾಗದಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದರೆ, ಕೂಂಬಿಂಗ್ ಕಾರ್ಯಾಚರಣೆಗಾಗಿ ಕರೆಸಿರುವ ದಸರಾ ಗಜಪಡೆಯ ನಾಲ್ಕು ಆನೆಗಳನ್ನು ಇಲವಾಲದ ಆಲೋಕದಲ್ಲಿರಿಸಲಾಗಿದೆ.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಜ.5ರಂದು ಬೆಳಗ್ಗೆ 6 ಗಂಟೆಯಲ್ಲಿ ವಿಮಾನ ನಿಲ್ದಾಣದ ಹಿಂಭಾಗದ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹುಲಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಅಂದು ದಿನವಿಡೀ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಎಲ್‍ಟಿಎಫ್, ಇಟಿಎಫ್ ಸಿಬ್ಬಂದಿ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಪಾಲ್ಗೊಂಡು ವಿಮಾನ ನಿಲ್ದಾಣದ ಆವರಣದಲ್ಲಿ ಶೋಧ ನಡೆಸಿದ್ದರು. ಅಲ್ಲದೆ, ಡ್ರೋನ್ ಹಾಗೂ ಥರ್ಮಲ್ ಡ್ರೋನ್‍ನಿಂದ ಹಗಲು, ರಾತ್ರಿ ಪರಿಶೀಲನೆ ನಡೆಸಿದ್ದರೂ, ಕಾಡಂದಿ ಹೊರತುಪಡಿಸಿ, ಹುಲಿ ಸುಳಿವು ಸಿಕ್ಕಿರಲಿಲ್ಲ.


ಆದರೂ ಮುಂಜಾಗ್ರತಾ ಕ್ರಮವಾಗಿ ದುಬಾರೆ ಕ್ಯಾಂಪ್‍ನಿಂದ ಪ್ರಶಾಂತ, ಹರ್ಷ, ಸುಗ್ರೀವ ಹಾಗೂ ಕಂಜನ್ ಆನೆಯನ್ನು ಕರೆ ತರಲಾಗಿದೆ. ನಾಲ್ಕು ಆನೆಗಳನ್ನು ಇಲವಾಲದ ಅಲೋಕದಲ್ಲಿರಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಡ್ರೋನ್‍ನಲ್ಲಿ ಪರಿಶೀಲಿಸುವ ವೇಳೆ ಹಾಗೂ ಸಿಸಿ ಕ್ಯಾಮರಾದಲ್ಲಿ ಮತ್ತೆ ಹುಲಿ ಸುಳಿವು ಪತ್ತೆಯಾದರೆ ಕೂಡಲೇ ಅಲೋಕದಲ್ಲಿರುವ ಆನೆಗಳನ್ನು ಕರೆಸಿ ಸೆರೆ ಹಿಡಿಯುವ ಪ್ರಕ್ರಿಯೆ ಮುಂದುವರೆಸಲಾಗುತ್ತದೆ.
ಒಂದು ವರ್ಷದಿಂದಲೂ ಇಲ್ಲೇ ಸುತ್ತಾಡುತ್ತಿರುವ ಶಂಕೆ: ವಿಮಾನ ನಿಲ್ದಾಣದ ಆವರಣದಲ್ಲಿ ಪ್ರತ್ಯಕ್ಷವಾಗಿರುವ ಹುಲಿಗೆ ಮೂರು ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. 2023 ಡಿಸೆಂಬರ್ ಹಾಗೂ 2024ರ ಜನವರಿ ತಿಂಗಳಲ್ಲಿ ಕಡಕೊಳ, ಟಿವಿಎಸ್ ಫ್ಯಾಕ್ಟರಿ, ದೊಡ್ಡಕಾನ್ಯ, ಚಿಕ್ಕಕಾನ್ಯ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಾಯಿಯೊಂದಿಗೆ ಓಡಾಡುತ್ತಿದ್ದ ಮೂರು ಮರಿಗಳಲ್ಲಿ ಒಂದು ಮರಿ 2024ರ ಜ.28ರಂದು ಮಧ್ಯರಾತ್ರಿ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಕಾರು ಡಿಕ್ಕಿ ಹೊಡೆದು ಮೃತಪಟ್ಟಿತ್ತು. ಅದರಲ್ಲಿ ಒಂದು ಮರಿಯೇ ದೊಡ್ಡದಾಗಿದ್ದು, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಹುಲಿಯೇ ಆಗಿರಬಹುದು ಎಂದು ಶಂಕಿಸಲಾಗಿದೆ. ಇದರಿಂದ ಕಳೆದ ಎರಡು ವರ್ಷದಿಂದ ಹುಲಿ ಮೈಸೂರಿನ ಸುತ್ತಮುತ್ತಲಿನ ಗ್ರಾಮಗಳಲ್ಲೇ ಓಡಾಡುತ್ತಿರಬಹುದಾಗಿದ್ದು, ವಿಮಾನ ನಿಲ್ದಾಣದ ಆವರಣದಲ್ಲಿ ಕಾಡುಹಂದಿಯನ್ನು ಬೇಟೆಯಾಡಿ ಜೀವಿಸುತ್ತಿರಬಹುದು ಎಂದು ಶಂಕಿಸಲಾಗಿದೆ.


ವಿಮಾನ ನಿಲ್ದಾಣದಿಂದ ಹುಲಿ ಪರಾರಿ: ಮಂಡಕಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದ್ದು, ಹುಲಿ ಪತ್ತೆಯಾಗಿಲ್ಲ. ವಿಮಾನ ನಿಲ್ದಾಣದ ಹಿಂಭಾಗದ ಕಾಂಪೌಂಡ್ ಗೋಡೆ ಹಾರಿ ಹುಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕಾಂಪೌಂಡ್ ಮೇಲೆ ಅಳವಡಿಸಿರುವ ತಂತಿಯಲ್ಲಿ ಹುಲಿಯ ಕೂದಲು ಹಾಗೂ ರಕ್ತ ಅಂಟಿಕೊಂಡಿದ್ದು, ಅದು ಹುಲಿಯದ್ದೇ ಎಂದು ಪಶುವೈದ್ಯರು ಖಚಿತ ಪಡಿಸಿದ್ದಾರೆ. ಅಲ್ಲದೆ ವಿಮಾನ ನಿಲ್ದಾಣದಿಂದ 1.50 ಕಿ.ಮಿ ದೂರದ ಜಮೀನೊಂದರ ಬಳಿ ಹುಲಿ ಹೆಜ್ಜೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಪತ್ತೆಯಾದ ಸ್ಥಳ, ಟಿವಿಎಸ್ ಫ್ಯಾಕ್ಟರಿ ಸುತ್ತಮುತ್ತ ಥರ್ಮಲ್ ಡ್ರೋನ್ ಬಳಸಿ ಪರಿಶೀಲಿಸಲಾಗಿದೆ. ಆದರೆ, ಎಲ್ಲಿಯೂ ಹುಲಿ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ರಾತ್ರಿ ವೇಳೆ ಅನಗತ್ಯವಾಗಿ ಓಡಾಡಬಾರದು. ವದಂತಿಗಳಿಗೆ ಹೆದರಬಾರದು ಎಂದು ಡಿಸಿಎಫ್ ಕೆ.ಪರಮೇಶ್ ತಿಳಿಸಿದ್ದಾರೆ.