
ಸಂಜೆವಾಣಿ ವಾರ್ತೆ
ಕುರುಗೋಡು. ಫೆ.17. ಹಂಪಿ ಉತ್ಸವದಲ್ಲಿ ಮಾತ್ರ ಕೆಲವು ಬೆರಗುಗಳನ್ನು ನೋಡುತ್ತಿದ್ದ ಈ ಭಾಗದ ಜನರಿಗೆ, ಕುರುಗೋಡು ಉತ್ಸವದಲ್ಲೂ ಬೆರಗುಗಳನ್ನು ಕಣ್ ತುಂಬಿಕೊಳ್ಳುವದಕ್ಕೆ ಕೆಲವು ಘಟನೆಗಳು ಸಾಕ್ಷಿಯಾದವು. ಹಳ್ಳಿಗಾಡಿನ ಜನರು ಭೂಮಿಯಲ್ಲಿ ಮೇಲೆ ನಿಂತು, ಆಕಾಶದಲ್ಲಿ ಹಾರುವ ವಿಮಾನಗಳನ್ನು, ಹೆಲಿಕಾಪ್ಟರ್ ಗಳನ್ನು ಕಣ್ಣಿಗೆ ಮರೆಯಾಗುವವರೆಗೆ ನೋಡುವುದು ಇಲ್ಲಿನ ಸಾಮಾನ್ಯ ಸನ್ನಿವೇಶಗಳು. ಆದರೆ ತಮ್ಮ ಕಣ್ಣೆದುರಿಗೆ ತಮ್ಮ ಮುಂದೆಯೇ ಹೆಲಿಕಾಪ್ಟರ್ ಆಕಾಶಕ್ಕೆ ಹಾರುವುದು ಮತ್ತು ಕೆಳಗಿಳಿಯುವುದನ್ನು ಎವೆ ಇಕ್ಕದೆ ನೋಡುತ್ತಾ ನಿಂತು, ಖುಷಿಪಟ್ಟ ಸಂಭ್ರಮದ ಕ್ಷಣ ಕುರುಗೋಡು ಉತ್ಸವದಲ್ಲಿ ಕಂಡುಬಂತು. ಕುರುಗೋಡು ಉತ್ಸವದ ಅಂಗವಾಗಿ ಫೆ.16 ರ 2ನೇ ದಿನ, ಐತಿಹಾಸಿಕ ಕ್ಷೇತ್ರ ಕುರುಗೋಡನ್ನು ಆಕಾಶದಿಂದ ವೀಕ್ಷಿಸುವ ಸಂತಸದ ಕ್ಷಣಗಳನ್ನು ಕೆಲವರು ಅನುಭವಿಸುವುದಕ್ಕೆ ಸಾಕ್ಷಿಯಾಯಿತು. 3600 ರೂಪಾಯಿಗಳನ್ನು ಸಲ್ಲಿಸಿ, ಒಂದು ಸುತ್ತು ಹೆಲಿಕ್ಯಾಪ್ಟರ್ ನಲ್ಲಿ ಆಕಾಶಕ್ಕೆ ಹಾರಿ ತಮ್ಮ ತಾಲೂಕಿನ ಚಿತ್ರಣವನ್ನು ಕಣ್ಣಿನಿಂದ ನೋಡಿ ಸಂಭ್ರಮಿಸುವ ರೋಮಾಂಚನ ಕ್ಷಣಗಳನ್ನು ಉತ್ಸಾಹಗೊಂಡಿದ್ದ ಜನಸಾಮಾನ್ಯರು ಅನುಭವಿಸಿದರು. ಪಟ್ಟಣದ ಕಂಪ್ಲಿ ರಸ್ತೆಯ ಬಸ್ ಡಿಪೋ ಹಿಂದಿನ ಪ್ರದೇಶದಲ್ಲಿ, ಕುರುಗೋಡು ಉತ್ಸವದ ಆಕರ್ಷಣೀಯ ಘಟನೆಗಳಲ್ಲಿ ಒಂದಾದ ಹೆಲಿಕಾಪ್ಟರ್ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದ ಸಂಜೆಯವರೆಗೂ ಎಡಬಿಡದೆ ಹೆಲಿಕ್ಯಾಪ್ಟರ್ ನಲ್ಲಿ ಸುತ್ತಾಡಲು ಹೆಚ್ಚಿನ ಆಸಕ್ತರು ಸಾಲಾಗಿ ನಿಂತಿರುವುದು ಕಂಡುಬಂತು.



























