ಕುಡಿವ ನೀರಿನ ಕೆರೆ ಅಭಿವೃದ್ಧಿಗೆ ಶಾಸಕರಿಂದ ಭೂಮಿ ಪೂಜೆ.


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ.9.
ಸಿರುಗುಪ್ಪ ತಾಲೂಕು ಸಿರಿಗೇರಿ ಸಮೀಪದ, ದಾಸಪುರ ಹತ್ತಿರದ ಕುಡಿಯುವ ನೀರಿನ ಕೆರೆ ಅಭಿವೃದ್ಧಿಗೆ, ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಇವರು ಜೂ.8ರಂದು ಭೂಮಿಪೂಜೆ ನೆರವೇರಿಸಿದರು. ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ 9.96 ಕೋಟಿ ರೂ. ವೆಚ್ಚದ ಅನುದಾನದಲ್ಲಿ, ಈಗ ಇರುವ ಕೆರೆಯನ್ನು ಆಳಕ್ಕೇ ಇಳಿಸುವುದು. ಹೊಸ ಪೈಪ್ ಲೈನ್ ಅಳವಡಿಸುವುದು. ಹೊಸ ಫಿಲ್ಟರ್ ಬೆಡ್ ಟ್ಯಾಂಕ್ ನಿರ್ಮಾಣ ಕೆಲಸಗಳ ಕಾಮಗಾರಿಗೆ ಚಾಲನೆ ನೀಡಿ, ಮಾತನಾಡಿದ ಶಾಸಕರು ಈ ಭಾಗದ ಕೊಂಚಗೇರಿ, ದಾಸಪುರ, ಸಿದ್ದರಾಮಪುರ, ಸಿರಿಗೇರಿ ಈ 4 ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮಾಡುವ ಈಕೆರೆ ನಿರ್ಮಾಣಗೊಂಡು ಬಹಳ ವರ್ಷ ಆಗಿದೆ. ಕೆರೆಯ ಕಟ್ಟಡ ಶಥಿಲಗೊಂಡು ಹೆಚ್ಚಿನ ನೀರು ಸೋರಿಕೆಯಿಂದ ಪೋಲಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿರುವ ಸಿರಿಗೇರಿಯ ದೊಡ್ಡ ಗ್ರಾಮಕ್ಕೆ ಮತ್ತು ಉಳಿದ ಮೂರು ಗ್ರಾಮಗಳಿಗೆ ನೀರು ಸಾಲುತ್ತಿಲ್ಲ. ಈ ಕಾರಣದಿಂದ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಸಿರಿಗೇರಿ ಗ್ರಾಮಕ್ಕೆ ಪ್ರತ್ಯೇಕ ಕೆರೆ ನಿರ್ಮಾಣಕ್ಕೆ ಜಾಗದ ಕೊರತೆ ಇರುವುದರಿಂದ ಮುಂದಿನ ದಿನಗಳಲ್ಲಿ ಪ್ರತ್ಯೇಕ ಕೆರೆಗೆ ಪ್ರಯತ್ನಿಸಲಾಗುವುದೆಂದು ತಿಳಿಸಿ, ಈ ಕಾಮಗಾರಿಯ ಗುತ್ತಿಗೆದಾರರು ಅಭಿಯಂತರರ ನಿರ್ದೇಶನದಂತೆ ಉತ್ತಮ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು. ಸಿರಿಗೇರಿ ಗ್ರಾಮದ ಮುಖಂಡರು, ಮತ್ತು ಕೊಂಚಗೇರಿ, ದಾಸಪುರ, ಸಿದ್ದರಾಮಪುರ ಗ್ರಾಮಗಳ ಮುಖಂಡರು, ತಾಲೂಕು ಮಟ್ಟದ ಮುಖಂಡರು, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಗುತ್ತಿಗೆದಾರರು, ಅಭಿಯಂತರರು, ಶಾಸಕರ ಆಪ್ತ ಸಹಾಯಕರು, ಕಾರ್ಯಕರ್ತರು ಪಾಲ್ಗೊಂಡಿದ್ದರು.