Home ಜಿಲ್ಲೆ ಮೈಸೂರು ಕುಡಿಯುವ ನೀರು ವ್ಯತ್ಯಯವಾಗದಂತೆ ಎಚ್ಚರ ವಹಿಸಿ: ಶಾಸಕ ಮಂಜು

ಕುಡಿಯುವ ನೀರು ವ್ಯತ್ಯಯವಾಗದಂತೆ ಎಚ್ಚರ ವಹಿಸಿ: ಶಾಸಕ ಮಂಜು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.05:
ಬೇಸಿಗೆ ಆರಂಭವಾಗಿದೆ. ಬೇಸಿಗೆಯ ದಿನಗಳಲ್ಲಿ ಗ್ರಾಮೀಣ ಭಾಗದ ಯಾವುದೇ ಹಳ್ಳಿಗಳಲ್ಲೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಆಯಾ ಭಾಗದ ಗ್ರಾಮ ಅಭಿವೃದ್ದಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಬೇಸಿಗೆ ಕಾಲದ ನೀರಿನ ಅಭಾವವನ್ನು ಎದುರಿಸಲು ಕೂಡಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶಾಸಕ ಹೆಚ್.ಟಿ.ಮಂಜು ನಿರ್ದೇಶಿಸಿದರು.


ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕುರಿತು ಆಯೋಜಿಸಿದ್ದ ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳು ಮತ್ತು ಪಿಡಿಓಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ತಾಲೂಕಿನ 34 ಗ್ರಾಮ ಪಂಚಾಯತಿಗಳ ಸಧ್ಯದ ಕುಡಿಯುವ ನೀರು ಪೂರೈಕೆಯ ಪರಿಸ್ಥಿತಿ, ಚಾಲ್ತಿಯಲ್ಲಿರುವ ಕೊಳವೆ ಬಾವಿಗಳ ಸ್ಥಿತಿಗತಿ, ಕೊಳವೆ ಬಾವಿಗಳು ಸ್ಥಗಿತಗೊಂಡರೆ ಕೈಗೊಳ್ಳಬೇಕಾದ ಪರ್ಯಾಯ ಕುಡಿಯುವ ನೀರು ಪೂರೈಕೆ ಕುರಿತು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಹಿತಿ ಪಡೆದ ಶಾಸಕರು ಸಮಸ್ಯೆ ಬಂದ ಮೇಲೆ ಪರದಾಡುವ ಬದಲು ಸಮಸ್ಯೆ ಬರದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಸ್ಥಗಿತಗೊಂಡಿರುವ ಕೊಳವೆ ಬಾವಿಗಳ ಮಾಹಿತಿ ಪಡೆದ ಶಾಸಕರು ಕುಡಿಯುವ ನೀರಿನ ಸಮಸ್ಯೆಗಳನ್ನು ಕುರಿತು ನಾನು ಈಗಾಗಲೇ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. 15 ನೇ ಹಣಕಾಸು ನಿಧಿಯಲ್ಲೂ ಹಣ ಇಲ್ಲ. ಕಳೆದ ವರ್ಷ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡಿದವರಿಗೆ ಇದುವರೆಗೂ ಪೇಮೆಂಟ್ ಆಗಿಲ್ಲ. ಶಾಸಕರ ಅನುದಾನದ ಲಭ್ಯತೆಯೂ ಕಡಿಮೆಯಿದೆ. 15 ನೇ ಹಣಕಾಸು ನಿಧಿಯ ಬಡ್ಡಿ ಮೊತ್ತವನ್ನು ಕ್ರೋಡೀಕರಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಿಯಾಯೋಜನೆ ರೂಪಿಸಿ ತಾಲೂಕು ಪಂಚಾಯತಿಗೆ ಸಲ್ಲಿಸಿ. 15 ನೇ ಹಣಕಾಸು ನಿಧಿಯ ಬಡ್ಡಿ ಹಣವನ್ನು ಕುಡಿಯುವ ನೀರಿನ ತುರ್ತು ವ್ಯವಸ್ಥೆಗೆ ಬಳಕೆ ಮಾಡಿಕೊಳ್ಳುವಂತೆ ಶಾಸಕರು ಸೂಚಿಸಿದರು.


ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಜೆಜೆಎಂ ಕಾಮಗಾರಿಯಿಂದ ಬಹುತೇಕ ಕಡೆ ರಸ್ತೆಗಳನ್ನು ಅಗೆಯಲಾಗಿದ್ದು ಸಾರ್ವಜನಿಕ ಸಮಸ್ಯೆ ಎದುರಾಗಿದೆ. ಜೆಜೆಎಂ ವತಿಯಿಂದ ತೆಗೆಸಿರುವ ಕೊಳವೆ ಬಾವಿಗಳಿಗೂ ಇದುವರೆಗೆ ಸಂಪರ್ಕ ಕಲ್ಪಿಸಿಲ್ಲ. ಮನೆ ಮನೆಗಳಿಗೆ ಸರಿಯಾದ ರೀತಿಯಲ್ಲಿ ನಲ್ಲಿಗಳನ್ನು ಅಳವಡಿಸಿಲ್ಲ. ಕೆಲವು ಕಡೆ ಕಳಪೆ ಸಾಮಗ್ರಿಗಳನ್ನು ಬಳಕೆ ಮಾಡಿದ್ದು ಮನೆಗಳಿಗೆ ಅಳವಡಿಸಿರುವ ನಲ್ಲಿಗಳು ಕಿತ್ತು ಬರುತ್ತಿವೆ. ಜೆಜೆಎಂ ಕಾಮಗಾರಿಯಿಂದ ಯಾವುದೇ ಕಾರಣಕ್ಕೂ ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಅಡ್ಡಿಯಾಗಬಾರದೆಂದು ಶಾಸಕರು ಎಚ್ಚರಿಸಿದರು. ತಾಲೂಕಿನ ಆಲಂಬಾಡಿ ಕಾವಲು ಗ್ರಾಮ ಪಂಚಾಯತಿಯಲ್ಲಿ ಕಳೆದ 5-6 ದಿನಗಳಿಂದ ಜನರಿಗೆ ಕುಡಿಯುವ ನೀರು ಬಿಟ್ಟಿಲ್ಲ. ಪಿಡಿಓ ಮೋಟಾರ್ ಸುಟ್ಟಿದೆ ಎಂದು ಕಾರಣ ಹೇಳುತ್ತಿದ್ದಾರೆ. ಸುಟ್ಟುಹೋದ ಒಂದು ಮೋಟಾರನ್ನು ತಕ್ಷಣವೇ ಸರಿಪಡಿಸಿ ಜನರಿಗೆ ಕುಡಿಯುವ ನೀರು ಕೊಡಲಾಗುವುದಿಲ್ಲವೇ? ಎಂದು ಶಾಸಕರು ಸದರಿ ಗ್ರಾಮ ಪಂಚಾಯತಿಯ ಪಿಡಿಓ ವಿರುದ್ದ ಹರಿಹಾಯ್ದರಲ್ಲದೆ ಕುಡಿಯುವ ನೀರು ಪೂರೈಕೆಯ ಬಗ್ಗೆ ಯಾವುದೇ ಸಬೂಬುಗಳನ್ನು ಪಿಡಿಓಗಳು ಹೇಳಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.


ವಿದ್ಯುತ್ ಇಲಾಖೆಯ ಅಸಹಕಾರದಿಂದ ಕೆಲವು ಕಡೆ ಕುಡಿಯುವ ನೀರು ಪೂರೈಕೆಗೆ ಅಡಚಣೆಯಾಗಿರುವುದನ್ನು ಪಿಡಿಓ ಗಳು ಸಭೆಯಲ್ಲಿ ಶಾಸಕರ ಗಮನಕ್ಕೆ ತಂದರು. ಸೆಸ್ಕಾಂ ಅಧಿಕಾರಿಗಳು ಕೆಲವು ಕಡೆ ಎಕ್ಸ್ಪ್ರೆಸ್ ಲೈನ್ ಮೂಲಕ ನೀಡುತ್ತಿದ್ದ ವಿದ್ಯುತ್ ಪೂರೈಕೆಯನ್ನು ಬದಲಿಸಿದ್ದಾರೆ. ಬೀರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೌಡಸಮುದ್ರ ಗ್ರಾಮದ ಕುಡಿಯುವ ನೀರು ಪೂರೈಕೆ ಘಕಟಕ್ಕೆ ಅಗತ್ಯ ಟಿ.ಸಿ ಅಳವಡಿಸಿ ಒಂದು ವರ್ಷ ಆಗಿದೆ. ಆದರೆ ಇದುವರೆಗೂ ಅದಕ್ಕೆ ವಿದ್ಯುತ್ ಸಂಪರ್ಕ ನೀಡಿಲ್ಲ. ಚಿಕ್ಕೋನಹಳ್ಳಿ ಗ್ರಾಮಕ್ಕೆ ಜೆಜೆಎಂ ಯೋಜನೆಯಡಿ ನೀರು ಪೂರೈಕೆ ಮಡಲು ಕೊಳವೆ ಬಾವಿ ಕೊರೆಸಿ ಎರಡು ವರ್ಷ ಆಗಿದೆ. ಆದರೆ ಇದಕ್ಕೆ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಬಲ್ಲೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತ್ತೀಕೆರೆಯಲ್ಲಿ ಕೇವಲ ಒಂದೇ ಒಂದು ಕೊಳವೆ ಬಾವಿ ಇದೆ. ಆದರೆ ಇದಕ್ಕೆ ಖಾಸಗಿ ವ್ಯಕ್ತಿಗಳ ಜಮೀನಿನ ಟಿ.ಸಿ ಯಿಂದ ಸಂಪರ್ಕ ಪಡೆಯಬೇಕಾಗಿದೆ. ಸೆಸ್ಕಾಂ ಅಧಿಕಾರಿಗಳು ಸಕಾರಾತ್ಮಕ ಸಹಕಾರ ನೀಡುವಂತೆ ಕೆಲವು ಪಿಡಿಓ ಗಳು ಸಭೆಯಲ್ಲಿ ಗಮನ ಸೆಳೆದರು. ಕುಡಿಯುವ ನೀರು ಪೂರೈಕೆ, ರೈತರ ಕೃಷಿ ಪಂಪ್ ಸೆಟ್ಟುಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸಮಸ್ಯೆಗಳಿಗೆ ಅನಗತ್ಯ ಕೊಕ್ಕೆಹಾಕದಂತೆ ಶಾಸಕರು ಸಭೆಯಲ್ಲಿದ್ದ ಸೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.


ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ತಾಲ್ಲೂಕು ಯೋಜನಧಿಕಾರಿ ಶ್ರೀನಿವಾಸ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳ ಆಡಳಿತಾಧಿಕಾರಿ ಅಧಿಕಾರಿಗಳು ಮತ್ತು ಪಿಡಿಓ ಗಳು ಸಭೆಯಲ್ಲಿದ್ದರು.