ಕುಟುಂಬ ವ್ಯವಸ್ಥೆ ಗಟ್ಟಿಯಾದಾಗ ಹಿಂದೂ ಸಂಸ್ಕೃತಿಯ ಉಳಿವು – ಗಣಪತಿ ಹೆಗಡೆ

ಸುಳ್ಯ: ಹಿಂದೂ ಸಂಗಮ ಕಾರ್ಯಕ್ರಮ: ಮೆರವಣಿಗೆ
ಸುಳ್ಯ:ಕುಟುಂಬ ವ್ಯವಸ್ಥೆ ಗಟ್ಟಿಯಾದಾಗ ನಮ್ಮ ಹಿಂದೂ ಸಂಸ್ಕೃತಿ ಉಳಿವು ಸಾಧ್ಯವಾಗಲಿದೆ ಎಂದು ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣಪತಿ ಹೆಗಡೆ ಹೇಳಿದರು.
ಅವರು ಸುಳ್ಯದ ಪ್ರಭು ಮೈದಾನದಲ್ಲಿ ನಡೆದ ಸುಳ್ಯ ಮಂಡಲ, ಸುಳ್ಯ ನಗರದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು. ಧರ್ಮ ಅನ್ನುವುದಕ್ಕೆ ಬಾಷಾಂತರ ಇಲ್ಲ. ಸುಪ್ರಿಂ ಕೋರ್ಟ್ ವ್ಯಾಖ್ಯೆ ಪ್ರಕಾರ ಹಿಂದು ಅನ್ನುವಂತಹದ್ದು, ಮತ ಸಂಪ್ರದಾಯ ಅಲ್ಲ. ಇದು ಜೀವನ ಪದ್ಧತಿ ಎಂದಿದೆ. ಹಿಂದು ಧರ್ಮದಲ್ಲಿ ಪ್ರಶ್ನೆ ಮಾಡುವ ಅವಕಾಶ ಇದೆ. ಇದರಿಂದಾಗಿ ಇಲ್ಲಿನ ಗ್ರಂಥಗಳು ವಿಸಕಸನಗೊಂಡಿದೆ. ವಿದೇಶಿಯರ ಆಕ್ರಮಣದಿಂದ ನಮಗೆ ಗೊತ್ತಿಲ್ಲದೇ ನಮ್ಮಲ್ಲಿ ಕೆಲ ವಿಕೃತಿಗಳು ಸೇರಿಕೊಂಡಿದೆ. ನನ್ನ ಸಮಾಜದ ಕೊರತೆಗಳನ್ನು ನಾವೇ ಸರಿಪಡಿಸಬೇಕು. ಆದ್ದರಿಂದ ಇಂದಿನ ಹಿಂದೂ ಸಂಗಮದಲ್ಲಿ ಕೈಗೊಂಡ ಸಂಕಲ್ಪಗಳು ಅನುಷ್ಠಾನಗೊಳ್ಳಲಿ ಎಂದರು.
ಹಿರಿಯ ಸಾಹಿತಿ ಜಯಮ್ಮ ಚಟ್ಟಿಮಾಡ ಮಾರ್ನಾಡು ಅವರು ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ದೈವ ನರ್ತಕ ಕೇಪು ಅಜಿಲ ಸುಳ್ಯ, ಆಯೋಜನ ಸಮಿತಿಯ ಗೌರವ ಸಲಹೆಗಾರರಾದ ಗಿರೀಶ್ ಭಾರದ್ವಾಜ್, ಡಾ.ಯಶೋಧ ರಾಮಚಂದ್ರ, ಡಾ.ಚಂದ್ರಶೇಖರ ನಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷ ಎಂ.ಬಿ.ಸದಾಶಿವ ಅವರು ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ಎ.ಟಿ. ಕುಸುಮಾಧರ ಸ್ವಾಗತಿಸಿದರು. ಸುನಿಲ್ ಕೇರ್ಪಳ ವಂದಿಸಿದರು. ಉದಯ ಭಾಸ್ಕರ ಹಾಗೂ ಗಾಯತ್ರಿ ವಿದ್ಯಾನಗರ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಸಂಕಲ್ಪಗಳನನ್ನು ಕೈಗೊಳ್ಳಲಾಯಿತು. ಆರಂಭದಲ್ಲಿ ನಗರದ ಜ್ಯೋತಿ ವೃತ್ತದ ಬಳಿಯಿಂದ ಚೆನ್ನಕೇಶವ ದೇವಸ್ಥಾನ ರಸ್ತೆಯಾಗಿ ಮೈದಾನಕ್ಕೆ ಮೆರವಣಿಗೆ ಸಾಗಿ ಬಂತು.