ಕುಖ್ಯಾತ ರೌಡಿಗಳಿಗೆ ಗುಂಡಿಕ್ಕಿ ಸೆರೆ

ಬೆಂಗಳೂರು,ಜು.೨೮-ದಲಿತ ಯುವಕನ ಕೈಕಟ್ ಮಾಡಿ ಪರಾರಿಯಾಗಿದ್ದ ಇಬ್ಬರು ಕುಖ್ಯಾತ ರೌಡಿಗಳಿಗೆ ಕನಕಪುರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಪೊಲೀಸರ ಗುಂಡೇಟು ತಿಂದಿರುವ ರೌಡಿಗಳಾದ ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಸ್ಥಳೀಯ ಆಸಿ ಚಿಕಿತ್ಸೆ ಪಡೆಯುತ್ತಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕನಕಪುರ ತಾಲೂಕಿನ ಮಳಗಾಳು ಬಳಿಯಲ್ಲಿ ಇಂದು ಮುಂಜಾನೆ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇವರಿಬ್ಬರು ರೌಡಿಗಳಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಪ್ರಾಣರಕ್ಷಣೆಗಾಗಿ ಹಾರಿಸಿದ ಗುಂಡುಗಳು ಕಾಲಿಗೆ ತಗುಲಿ ಇಬ್ಬರು ಕುಸಿದುಬಿದ್ದಿದ್ದಾರೆ.
ತಕ್ಷಣವೇ ಅವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ತನಿಖೆಯನ್ನು ಮುಂದುವರೆಸಲಾಗಿದೆ ಎಂದು ರಾಮನಗರ ಎಸ್ ಪಿ ಕಾರ್ತಿಕ್ ರೆಡ್ಡಿ ತಿಳಿಸಿದರು.
ದಲಿತ ಸಮುದಾಯದವರ ಮೇಲೆ ಹಲ್ಲೆಯ ಜೊತೆಗೆ ಓರ್ವನ ಕೈ ತುಂಡರಿಸಿ ಪರಾರಿಯಾಗಿದ್ದ ರೌಡಿಶೀಟರ್ ಗಳಾದ ಹರ್ಷ ಅಲಿಯಾಸ್ ಕೈಮ ಮತ್ತು ಕರುಣೇಶ್ ಅಲಿಯಾಸ್ ಕಣ್ಣನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆರೋಪಿಗಳಿರುವ ಮಾಹಿತಿ ಅರಿತ ಪೊಲೀಸ್ ತಂಡ, ಮಳಗಾಳು ಗ್ರಾಮಕ್ಕೆ ತೆರಳಿತ್ತು. ಈ ಸಂದರ್ಭದಲ್ಲಿ ಬಂಧಿಸಲು ಬಂದ ಪೊಲೀಸರ ಮೇಲೆಯೇ ರೌಡಿಶೀಟರ್‌ಗಳು ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಸರ್ಕಲ್ ಇನ್ಸ್‌ಪೆಕ್ಟರ್ ಮಿಥುನ್ ಶಿಲ್ಪಿ, ಕೃಷ್ಣ ಲಮಾಣಿ, ಪಿಎಸ್‌ಐಗಳಾದ ಮನೋಹರ್, ರವಿಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಗುಂಡು ಹಾರಿಸಿ ಬಂಧಿಸಲಾಗಿದೆ.
ಆರೋಪಿಗಳ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳಾದ ರಾಜಶೇಖರ್, ಶಿವಕುಮಾರ್ ಹಾಗು ಗುಂಡೇಟಿನಿಂದ ಗಾಯಗೊಂಡ ಆರೋಪಿಗಳನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹರ್ಷ ಹಾಗೂ ಕರುಣೇಶ್ ಮೇಲೆ ೫ಕ್ಕೂ ಹೆಚ್ಚು ಪ್ರಕರಣಗಳಿವೆ.ಘಟನಾ ಸ್ಥಳಕ್ಕೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಬೇಟಿ ನೀಡಿದ್ದು, ಸ್ಥಳೀಯ ಪೊಲೀಸರಿಂದ ಮಾಹಿತಿ ಸಂಗ್ರಹಿಸಿ, ಬಳಿಕ ಆಸ್ಪತ್ರೆಗೆ ಭೇಟಿ ನೀಡಿ, ಗಾಯಗೊಂಡ ಪೊಲೀಸರು ಹಾಗು ಆರೋಪಿಗಳ ಆರೋಗ್ಯ ವಿಚಾರಿಸಿದರು.
ದಲಿತರಪ್ರತಿಭಟನೆ:
ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ದಲಿತ ಸಂಘಟನೆಗಳು ಪ್ರತಿಭಟಿಸಿದ್ದವು. ಈ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.