
ಪುತ್ತೂರು: ಪುತ್ತೂರಿನ ಅತೀ ಹೆಚ್ಚು ಭಕ್ತರನ್ನೊಳಗೊಂಡ ಕಾಸರಗೋಡು ತಾಲೂಕಿನ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನವೀಕರಣ ಪುನರ್‌ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಉತ್ಸವ ಎ.೧೭ ರಿಂದ ೨೮ರ ತನಕ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಪ್ರಮುಖ ೫ನೇ ಕ್ಷೇತ್ರವಾಗಿರುವ ಪೆರಡಾಲದಲ್ಲಿ ಉದನೇಶ್ವರ ದೇವರು ನೆಲೆಯಾಗಿದ್ದಾರೆ. ಶಾಸ್ತಾರ ದೇವರು ಸ್ಥಳ ಸಾನಿಧ್ಯವಾಗಿದ್ದು, ಕ್ಷೇತ್ರದ ಒಳಗೋಪುರದಲ್ಲಿ ಕುಟ್ಟಿಚಾತ-ಕುಕ್ಷಿಶಾಸ್ತರ ಕಾರಣಿಕ ಶಕ್ತಿಯಾಗಿ ಪ್ರಸಿದ್ದಿ ಪಡೆದಿದೆ. ’ ಪಡೆ’ ಸಮರ್ಪಣೆಯು ಕುಟ್ಟಿಚಾತನಿಗೆ ಸಮರ್ಪಿಸುವ ಪ್ರಮುಖ ಸೇವೆಯಾಗಿದೆ ಎಂದ ಅವರ ಬ್ರಹ್ಮಕಲಶೋತ್ಸವಕ್ಕೆ ಎ.೧೭ರಂದು ಹಸಿರುಹೊರೆಕಾಣಿಕೆ ಮೆರವಣಿಗೆ, ಎ.೧೮ರಂದು ನವೀಕರಿಸಿದ ರಾಜಗೋಪುರ, ರಾಜಾಂಗಣ ಮೇಲ್ಚಾವಣಿ ಮತ್ತು ನೂತನ ಭೋಜನ ಶಾಲೆ ಲೋಕಾರ್ಪಣೆ ನಡೆಯಲಿದೆ. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಎ.೨೩ರಂದು ಶ್ರೀದೇವರ ಪ್ರತಿಷ್ಠೆ ನಡೆಯಲಿದೆ. ಎ.೨೬ರಂದು ಎಡನೀರು ಸಚ್ಚಿದಾನಂದ ಭಾರತೀ ಸ್ವಾಮಿಜಿಯವರ ಉಪಸ್ಥಿತಿಯಲ್ಲಿ ಸಹಸ್ರ ಕಲಶಾಭಿಷೇಕ ಮತ್ತು ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಎ.೨೭ರಂದು ವರ್ಷಾವಧಿ ಉತ್ಸವ ನಡೆಯಲಿದೆ. ಎ.೨೮ಕ್ಕೆ ಶ್ರೀ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಿಲಿಚಾಮುಂಡಿ ದೈವದ ಕೋಲ ನಡೆಯಲಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಮೂರು ವೇದಿಕೆಯಲ್ಲಿ ನಿರಂತರ ಸಾಂಸ್ಕೃತಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಜೊತೆಕಾರ್ಯದರ್ಶಿ ಮತ್ತು ಪ್ರಚಾರ ಸಮಿತಿ ಸಂಚಾಲಕ ಡಾ. ಶ್ರೀಶಕುಮಾರ್ ಪಂಜಿತ್ತಡ್ಕ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಪ್ರಧಾನ ಸಂಚಾಲಕ ರಾಜೇಶ್ ಮಾಸ್ಟರ್ ಆಗಲ್ಪಾಡಿ, ಲೆಕ್ಕಪರಿಶೋಧಕ ಕುಂಞಣ್ಣ ಉಪಸ್ಥಿತರಿದ್ದರು.























