ಸಂಜೆವಾಣಿ ನ್ಯೂಸ್
ಮೈಸೂರು: ಸೆ.24:- ಕಾವ್ಯ ಕೇವಲ ರಚನೆಯಲ್ಲ ಶೋಧನೆಯಾಗಿರಬೇಕು. ಕಾವ್ಯ ಜಾತಿ, ಧರ್ಮ, ಲಿಂಗ ಭೇದಗಳ ಆಚೆಗೆ ಎಲ್ಲರನ್ನು ಒಗ್ಗೂಡಿಸಿ ಬೆಸೆಯುವ ಕೆಲಸ ಮಾಡುತ್ತದೆ ಎಂದು ಕವಯಿತ್ರಿ ಪೆÇ್ರ.ಗೀತಾ ವಸಂತ ಹೇಳಿದರು.
ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ 5 ದಿನಗಳ ಕಾಲ ಆಯೋಜಿಸಿರುವ ಪಂಚಕಾವ್ಯದೌತಣ ಪ್ರಭಾತ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಣ್ಣಕಾವ್ಯ, ಮಹಾಕಾವ್ಯ ಹಾಗೂ ಪ್ರಾಚೀನ ಕಾವ್ಯಗಳು ಜನರ ಆಶೋತ್ತರಗಳನ್ನು ಅಭಿವ್ಯಕ್ತಗೊಳಿಸುತ್ತವೆ. ಭಾವಕೋಶ, ಅನುಭವ ಕೋಶದಿಂದ ತಾತ್ವಿಕವಾಗಿ ಕಟ್ಟುವುದೇ ಕಾವ್ಯ ಎಂದ ಅವರು, ಕುವೆಂಪು ಹೇಳಿದಂತೆ ಕವಿಗಳು ವಿಶ್ವಮಾನವ ಪ್ರಜ್ಞೆ ಹೊಂದಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಸತ್ವಹೀನ ಕಾವ್ಯಗಳು ಹೆಚ್ಚಾಗಿದ್ದು, ಕಾವ್ಯದ ಮೂಲಕ ಅಂಚಿನಲ್ಲಿರುವ ಎಲ್ಲಾ ವರ್ಗದವರಿಗೆ ಧ್ವನಿಯಾಗಿ, ಇಡೀ ಸಮುದಾಯದ ಮನಸ್ಸನ್ನು ಅನ್ವೇಷಣೆ ಮಾಡಬೇಕು. ವಿಶಾಲ ದರ್ಶನ, ಸತ್ಯವನ್ನು ಆರಾಧಿಸಿದರೆ ಉತ್ತಮ ಕಾವ್ಯಗಳು ಜನನವಾಗುತ್ತವೆ ಎಂದು ಕವಿಗಳಿಗೆ ಸಲಹೆ ನೀಡಿದರು.
ಗೀತ ರಚನಾಕಾರ ಕವಿರಾಜ್ ಮಾತನಾಡಿ, ನಿಸರ್ಗ ಕೆಲವು ವ್ಯಕ್ತಿಗಳಿಗೆ ಮಾತ್ರ ಬರವಣಿಗೆಯ ಸೃಜನಶೀಲತೆ ನೀಡುತ್ತದೆ. ಕವಿತೆ ಸಮಾಜದಲ್ಲಿ ಸಣ್ಣ ಬದಲಾವಣೆಗೆ ಬೀಜ ಬಿತ್ತುತ್ತದೆ. ನಾವು ರಚಿಸಿರುವ 4 ಸಾಲುಗಳು ಯಾವುದೋ ಒಂದು ಜೀವಕ್ಕೆ ಉಪಯೋಗವಾದರೆ ಸಾಕು ಎಂದರು.
ಟ್ರೋಲ್ ಯುಗದಲ್ಲಿ ಸಮಚಿತ್ತವಾಗಿ ಮಾತನಾಡುವವರನ್ನು ಸಮಾಜ ಗಮನಿಸುವುದಿಲ್ಲ. ಹಾಗಾಗಿ ರಮ್ಯತೆಯಿಂದ ಆಚೆಗೆ ಬಂದು ಸಮಾಜದ ತಲ್ಲಣಗಳಿಗೆ ಈಗಿನ ಕವಿಗಳು ಧನಿಯಾಗುವಂತೆ ಸಲಹೆ ನೀಡಿದರು.
ಪ್ರಾದೇಶಿಕ ಕವಿಗಳಿಂದ ಕವನ ವಾಚನ: ಪಂಚಕಾವ್ಯದೌತಣದ ಮೊದಲ ದಿನವಾದ ಇಂದು ಪ್ರಭಾತ ಕವಿಗೋಷ್ಠಿಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ಆಗಮಿಸಿದ ಪ್ರಾದೇಶಿಕ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿ ನೆರೆದ ಕನ್ನಡಾಭಿಮಾನಿಗಳಿಂದ ಸೈ ಎನಿಸಿಕೊಂಡರು.
ಪ್ರಾಧ್ಯಾಪಕರು, ಅಂಚೆ ಇಲಾಖೆ, ಅರಣ್ಯ, ಪೆÇಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು, ರೈತರು, ಶಾಲಾ ಮಕ್ಕಳು ಕವನ ವಾಚಿಸಿ ಕನ್ನಡಾಭಿಮಾನ ಮೆರೆದಿದ್ದಾರೆ. ಭಿಜ್ಞಾ ಪಿ.ಎಂ.ಗೌಡ ಮತ್ತೊಮ್ಮೆ ಹುಟ್ಟಿ ಬಾ ಅಣ್ಣ ಬಸವಣ್ಣ ಕೊಡಗು ಜಿಲ್ಲೆಯ ಅಯ್ಯಪ್ಪ.ಎಂ ಗಜವೀರ ಅಭಿಮನ್ಯು ಕುರಿತು ಕವಿತೆ ವಾಚಿಸಿದರೆ. ಚಾಮರಾಜನಗರದ ಕೊಳ್ಳೆಗಾಲದವರಾದ ಖಾತ್ಯಾಯಿಣಿ.ಪಿ ಅಕ್ಕ ತನ್ನ ತಂಗಿಗೆ ಧೈರ್ಯ ತುಂಬುವ ಕವಿತೆ ಭದ್ರೆ ಜೀವ ಭದ್ರಯನ್ನು ವಾಚಿಸಿದರು.
ನಂಜನಗೂಡಿನ ಯುವ ಕವಿ ಕೊಲ್ಲುವುದಾದರೆ ಜಾತಿ, ಧರ್ಮ, ಬಡತನ, ಭ್ರಷ್ಟಾಚಾರವನ್ನು ಕೊಲ್ಲಲಿ ಎಂಬ ಕವತಿ ವಾಚಿಸಿದರೆ. ಕೊಡಗಿನ ಜಲಜ ಶೇಖರ್ ಅವರು ಕಾಶ್ಮೀರದಲ್ಲಿ ಉಗ್ರರ ನರಮೇದವನ್ನು ಕವಿತೆ ಮೂಲಕ ಭಾರತೀಯರ ನರಳಾಟ ಚಿತ್ರಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಉಪ ಆಯುಕ್ತ ಜಿ.ಎಸ್.ಸೋಮಶೇಖರ್, ಬೆಂಗಳೂರು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಮುಕುಂದ ರಾಜ್, ಪಂಚಕಾವ್ಯದೌತಣ ಪರಿಕಲ್ಪನಾಕಾರರೂ ಆದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪೆÇ್ರ.ಎನ್.ಕೆ.ಲೋಲಾಕ್ಷಿ ಸೇರಿದಂತೆ ಹಲವು ಗಣ್ಯರು, ಕವಿಗಳು ಹಾಜರಿದ್ದರು.


























