
ಪೃಥ್ವಿ ಶಾಮನೂರು ಹೊಸ ಲವ್ ಸ್ಟೋರಿ ಆರಂಭ ಯುವ ಮನಸ್ಸಿನ ಮೃದುವಾದ ಭಾವನೆಗಳನ್ನು ಮರುಕಳಿಸುವ 2000ರ ದಶಕದ ಕಾಲೇಜ್ ಪ್ರೇಮಕಥೆಯನ್ನು ತೆರೆಗೆ ತರುವ ಪ್ರಯತ್ನವಾಗಿ ‘ಹೃದಯಾ’ ಸಿನಿಮಾ ಆರಂಭವಾಗಿದೆ. ಪದವಿಪೂರ್ವ, ಉಡಾಳ ಖ್ಯಾತಿಯ ನಟ ಪೃಥ್ವಿ ಶಾಮನೂರು ಈ ಯೂಥ್‌ಫುಲ್ ಲವ್ ಸ್ಟೋರಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಶ್ರೀಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು.
ಕನ್ನಡ ಚಿತ್ರರಂಗದ ನಿರ್ದೇಶನ ವಿಭಾಗದಲ್ಲಿ ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ರಜತ್ ಸೂರ್ಯವಂಶಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಪ್ರಣಿತ್ ಪಿಕ್ಚರ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀದೇವಿ ಎಲ್.ಕೆ. ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ದೃಶ್ಯಕ್ಕೆ ನಟ ನವೀನ್ ಶಂಕರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ನಿರ್ದೇಶಕ ಯೋಗರಾಜ ಭಟ್ ಹಾಗೂ ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಂಡಕ್ಕೆ ಶುಭಾಶಯ ಕೋರಿದರು.
ನೈಜ ಘಟನೆಯೊಂದನ್ನು ಆಧರಿಸಿದ ಫೀಲ್‌ಗುಡ್ ಲವ್ ಸ್ಟೋರಿ ಇದು. 2000-2006ರ ಅವಧಿಯಲ್ಲಿ ಕಾಲೇಜು ಯುವಜನರ ಮಧ್ಯೆ ಪ್ರೀತಿ, ಪ್ರೇಮ ಹೇಗೆ ರೂಪುಗೊಳ್ಳುತ್ತಿತ್ತು ಎಂಬುದನ್ನು ಚಿತ್ರದಲ್ಲಿ ತೋರಿಸುತ್ತಿದ್ದೇವೆ,” ಎಂದು ಹೇಳಿದರು. ಚಿತ್ರದಲ್ಲಿ ಐದು ಹಾಡುಗಳಿದ್ದು, ಚೇತನ್ ದಾವ್ಯ ಸಂಗೀತ ನೀಡುತ್ತಿದ್ದಾರೆ ಎಂದು ತಿಳಿಸಿದರು.
ನಾಯಕ ಪೃಥ್ವಿ ಶಾಮನೂರು ಮಾತನಾಡಿ,‘ಹೃದಯಾ’ 2006ರಲ್ಲಿ ನಡೆಯುವ ಅಪ್ಪಟ ಕಾಲೇಜ್ ಪ್ರೇಮಕಥೆ. ಕಥೆ ಕೇಳಿದ ಕ್ಷಣವೇ ಒಪ್ಪಿಕೊಂಡೆ. ಕಾಲೇಜು ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ,” ಎಂದರು.
ನಾಯಕಿ ಆರಾಧನಾ ಭಟ್, “ಕಿರುತೆರೆಯ ‘ಮಹಾನಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಇದು ನನ್ನ ಎರಡನೇ ಚಿತ್ರ. ಕಥೆ ತುಂಬಾ ಇಷ್ಟವಾಯಿತು. ಕಾಲೇಜು ಹುಡುಗಿಯ ಪಾತ್ರದಲ್ಲಿ ಮೂವರು ವಿಭಿನ್ನ ಶೇಡ್ಸ್ ಹೊಂದಿದ್ದೇನೆ,” ಎಂದು ಹೇಳಿದರು.ನಿರ್ಮಾಪಕಿ ಶ್ರೀದೇವಿ ಎಲ್.ಕೆ., ನಿರ್ದೇಶಕರು ರೂಪಿಸಿಕೊಂಡಿರುವ ಕಥೆ ಮನಸ್ಸಿಗೆ ತಟ್ಟಿತು. ಅದಕ್ಕಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆವು,” ಎಂದರು.
ಚಿತ್ರದಲ್ಲಿ ನಾಯಕಿಯ ತಂದೆಯಾಗಿ ರಮೇಶ್ ಇಂದಿರಾ, ನಾಯಕನ ತಂದೆ-ತಾಯಿಯಾಗಿ ರವಿಭಟ್ ಹಾಗೂ ಸ್ವಾತಿ, ಸ್ನೇಹಿತನಾಗಿ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಸೂರಜ್ ನಟಿಸುತ್ತಿದ್ದಾರೆ. ಸಾಗರ್ ಛಾಯಾಗ್ರಹಣ, ರಜತ್,ಉಪೇಂದ್ರ, ಮನೋಜ್ ಸಂಭಾಷಣೆ, ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಗೂ ಧನಂಜಯ್ ಸಾಹಿತ್ಯ ಚಿತ್ರಕ್ಕಿದೆ.ಯುವ ಮನಸ್ಸಿನ ಪ್ರೀತಿಯ ಹಾದಿಯನ್ನು ನವೀನ ಶೈಲಿಯಲ್ಲಿ ಹೇಳಲು ಸಜ್ಜಾಗಿರುವ ‘ಹೃದಯಾ’ ಶೀಘ್ರದಲ್ಲೇ ಚಿತ್ರೀಕರಣ ಆರಂಭಿಸಲಿದೆ.


























