Home ಜಿಲ್ಲೆ ಮಂಗಳೂರು ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳಿಂದ ಜೂನಿಯರ್‌ಗಳ ಮೇಲೆ ಮಾರಣಾಂತಿಕ ರ್‍ಯಾಗಿಂಗ್: ಕೇರಳ ಮೂಲದ ೫ ಮಂದಿ ವಿದ್ಯಾರ್ಥಿಗಳ...

ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳಿಂದ ಜೂನಿಯರ್‌ಗಳ ಮೇಲೆ ಮಾರಣಾಂತಿಕ ರ್‍ಯಾಗಿಂಗ್: ಕೇರಳ ಮೂಲದ ೫ ಮಂದಿ ವಿದ್ಯಾರ್ಥಿಗಳ ಬಂಧನ

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳನ್ನು ಅಪಹರಿಸಿ, ಕೊಠಡಿಯಲ್ಲಿ ಕೂಡಿಹಾಕಿ ಬೆಲ್ಟ್ ಹಾಗೂ ಕಬ್ಬಿಣದ ಪಂಚ್‌ನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದ ಭೀಕರ ರ್‍ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಹಿರಿಯ ವಿದ್ಯಾರ್ಥಿಗಳನ್ನು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರೆಲ್ಲರೂ ಅದೇ ಕಾಲೇಜಿನ ದ್ವಿತೀಯ ವರ್ಷದ ಬಿಬಿಎ ಲಾಜಿಸ್ಟಿಕ್ಸ್ ವಿದ್ಯಾರ್ಥಿಗಳಾಗಿದ್ದು, ಕೇರಳದ ಪಯ್ಯನ್ನೂರಿನ ರೆಹಾನ್ ಎಂ.ಪಿ (೧೯), ಕಾಸರಗೋಡಿನ ಮೊಹಮ್ಮದ್ ಉವೈಸ್ (೧೯), ಕೋಯಿಕ್ಕೋಡ್‌ನ ಮೊಹಮ್ಮದ್ ಆದಿಲ್ ಯು.ಪಿ (೧೯), ಕಣ್ಣೂರಿನ ರೋಹನ್ ರಮೇಶ್ (೧೯) ಹಾಗೂ ಕಣ್ಣೂರಿನ ನಾಶೀದ್ ಅಮೀರ್ (೧೯) ಎಂದು ಗುರುತಿಸಲಾಗಿದೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಕೇರಳದ ತ್ರಿಶೂರ್ ಮೂಲದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿಗಳಾದ ಅಮೀರ್ ಅಲಿ (೧೯) ಹಾಗೂ ಮಹಮ್ಮದ್ ಅಲ್ಪಾಜ್ (೧೯) ಹಲ್ಲೆಗೊಳಗಾದವರು.
ಕಳೆದ ಆಗಸ್ಟ್ ೧೯ರಂದು ಕಾಲೇಜಿನಿಂದ ಹೊರಗೆ ನಡೆದುಕೊಂಡು ಹೋಗುತ್ತಿದ್ದ ಇಬ್ಬರೂ ವಿದ್ಯಾರ್ಥಿಗಳನ್ನು ಬೈಕ್‌ನಲ್ಲಿ ಬಲವಂತವಾಗಿ ಅಪಹರಿಸಿದ್ದ ಆರೋಪಿಗಳು, ನಿರ್ಜನ ಮನೆಯೊಂದರ ಕೊಠಡಿಯಲ್ಲಿ ಕೂಡಿಹಾಕಿ ಬಟ್ಟೆ ಬಿಚ್ಚಿಸಿ ಬೆಲ್ಟ್, ಹ್ಯಾಂಗರ್ ಹಾಗೂ ಕಬ್ಬಿಣದ ಪಂಚ್‌ನಿಂದ ಮನಸೋಇಚ್ಛೆ ಥಳಿಸಿದ್ದರು. ಅಲ್ಲದೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕಾಲೇಜಿನಲ್ಲಿ ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸುವುದಾಗಿ ಕೊಲೆ ಬೆದರಿಕೆಯನ್ನೂ ಹಾಕಿದ್ದರು.
ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಸಂತ್ರಸ್ತ ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದು, ಬಳಿಕ ಮಂಗಳೂರು ದಕ್ಷಿಣ ಠಾಣೆಗೆ ಆಗಮಿಸಿ ದೂರು ನೀಡಿದ್ದರು. ಒಟ್ಟು ೯ ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಿಎನ್‌ಎಸ್ ಕಲಂಗಳು ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕಾರ್ಯಾಚರಣೆ ನಡೆಸಿ ಇದೀಗ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.