
ಪುತ್ತೂರು: ಅಧಿಕಾರ ಬಂದಾಗ ಅದನ್ನು ಚಲಾಯಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಎದೆ ತಟ್ಟಿ ಮಾತನಾಡುವಂತೆ ಮಾಡಿದೆ. ಸರ್ಕಾರದ ಕೆಲಸ ಕಾರ್ಯಗಳನ್ನು ಜನರ ಬಳಿಗೆ ಸಾಗಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಸೋಮವಾರ ಪುತ್ತೂರಿನ ಜೈನ ಭವನದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರ ಮತ್ತು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ನಡೆದ ‘ಪದಗ್ರಹಣ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಪ್ರಚಾರ ಸಮಿತಿಯ ಕಾರ್ಯಕಗಳು ಪೂರಕವಾಗಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಇತರ ರಾಜ್ಯಗಳಲ್ಲಿ ಬೇರೆ ಪಕ್ಷಗಳು ನಕಲು ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾಂಗ್ರೆಸ್ ಸಿದ್ಧಾಂತವೂ ಆಗಿದೆ. ಪಕ್ಷದ ಸಿದ್ಧಾಂತ ಮತ್ತು ಇತಿಹಾಸವನ್ನು ಗಟ್ಟಯಾಗಿ ಜನಮಾನಸದಲ್ಲಿ ಬೇರೂರುವಂತೆ ಮಾಡುವ ಕೆಲಸವಾಗಬೇಕು ಕಾಂಗ್ರೆಸ್ ಸರ್ಕಾರ ಶೇ.೯೫ ಕೆಲಸ ಮಾಡುತ್ತದೆ. ಆದರೆ ಪ್ರಚಾರ ಶೇ.೫ ಮಾತ್ರ ಆಗುತ್ತದೆ. ನಮ್ಮ ವಿರೋಧ ಪಕ್ಷಗಳು ಶೇ.೫ರಷ್ಟು ಕೆಲಸ ಮಾಡಿ ಶೇ.೯೫ ಪ್ರಚಾರ ಮಾಡುತ್ತವೆ. ವರ್ಷದ ೩೬೫ ದಿನವೂ ಪ್ರಚಾರ ಮಾಡುವುದು ಈಗಿನ ಅಗತ್ಯ ಎಂದು ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಮುನೀರ್ ಜನ್ಸಾಲೆ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಸುಧೀರ್ ಕುಮಾರ್ ಮರೋಳಿ ಮುಖ್ಯ ಪ್ರಭಾಷಣ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಶಕುಂತಳಾ ಟಿ ಶೆಟ್ಟಿ, ಜೆ.ಆರ್. ಲೋಬೋ, ಪಕ್ಷದ ಪ್ರಮುಖರಾದ ಎಂ.ಎಸ್. ಮಹಮ್ಮದ್, ಭರತ್ ಮುಂಡೋಡಿ, ಶಾಹುಲ್ ಹಮೀದ್, ಕೃಷ್ಣಪ್ಪ, ಉಷಾ ಅಂಚನ್, ಡೆನ್ನಿಸ್ ಡಿಸಿಲ್ವ, ಕೆ.ಪಿ. ತೋಮಸ್, ಕೆ.ಪಿ. ಜಾನ್, ಜೋಕಿಂ ಡಿಸೋಜ, ಉಮಾನಾಥ ಶೆಟ್ಟಿಪೆರ್ನೆ, ಅಮಳ ರಾಮಚಂದ್ರ, ಯು.ಟಿ. ತೌಸೀಫ್, ಪ್ರಸಾದ ಕೌಶಲ್ ಶೆಟ್ಟಿ, ಸತೀಶ್ ಕುಮಾರ್ ಕೆಡೆಂಜಿ, ಅಭಿಲಾಷ್ ಪಿ.ಕೆ. ಸರಸ್ವತಿ ಕಾಮತ್ ಡಾ. ರಾಜಾರಾಂ ಕೆ.ಬಿ, ದಿನೇಶ್ ಅಂಬೆಕಲ್ಲು, ಅಶ್ರಫ್ ನೆರಿಯ, ಅಬ್ದುಲ್ಲಾ ಗಫೂರ್ ಕಲ್ಮಡ್ಕ, ಅಮರನಾಥ ಗೌಡ, ಶ್ರೀಧರ ಶೆಟ್ಟಿ ಪುಣಚ, ಲಾದ್ರು ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಸ್ವಾಗತಿಸಿದರು. ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ನಿರ್ವಹಿಸಿದರು.






























