ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಸಮಾವೇಶ

ಸಂಜೆವಾಣಿ ವಾರ್ತೆ

ಬಳ್ಳಾರಿ, ಜ,31- ಇಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ  ನಗರದ ಗಾಂಧಿ ಭವನದಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಲೇಬರ್ ಕೋಡ್ ಹಾಗೂ ಇನ್ನಿತರ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ನಡೆಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಈ ಸಮಾವೇಶವನ್ನು ಸಂಘಟಿಸಲಾಗಿತ್ತು. ಎಐಯುಟಿಯುಸಿ, ಸಿಐಟಿಯು, ಎಐಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಸೇರಿದಂತೆ, ಅಖಿಲ ಭಾರತ ವಿಮಾ ನೌಕರರ ಸಂಘಟನೆ,  ಬ್ಯಾಂಕ್ ನೌಕರರ ಸಂಘಟನೆಗಳು, ರೈತ ಸಂಘಟನೆಗಳಾದ ಎಐಕೆಕೆಎಂಎಸ್, ಕರ್ನಾಟಕ ರಾಜ್ಯ ರಾಜ್ಯ ರೈತ ಸಂಘ, ಯುವಜನ, ಮಹಿಳಾ ಹಾಗೂ ವಿದ್ಯಾರ್ಥಿ ಸಂಘಟನೆಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದವು.

 ಕಾರ್ಮಿಕ ವಿರೋಧಿ, ಜನವಿರೋಧಿ ನೀತಿಗಳ ವಿರುದ್ಧ ಫೆಬ್ರವರಿ 12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಅದನ್ನು ರಾಜ್ಯದಲ್ಲಿ ಯಶಸ್ವಿಗೊಳಿಸಬೇಕೆಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡುತ್ತಿದೆ.

ಈ ಸಂದರ್ಭದಲ್ಲಿ ವಿವಿಧ ಕಾರ್ಮಿಕ ಮುಖಂಡರು ಮಾತನಾಡಿದರು.

ಈ ಸಮಾವೇಶದ ಅಧ್ಯಕ್ಷತೆಯನ್ನು ಅರ್.ಸೋಮಶೇಖರ್ ಗೌಡ ವಹಿಸಿದ್ದರು, ಸಿಐಟಿಯು ಮುಖಂಡರಾದ ಸತ್ಯ ಬಾಬು, ಎಐಯುಟಿಯುಸಿ ಎ.ಶಾಂತ, ಸುರೇಶ್,  ಎಐಟಿಯುಸಿ ಚನ್ನಬಸಯ್ಯ,  ಎಲ್ಐಸಿ ಯೂನಿಯನ್ ಸೂರ್ಯನಾರಾಯಣ, ಬ್ಯಾಂಕ್ ಯೂನಿಯನ್ ಪ್ರದೀಪ್, ಸಿಐಟಿಯು ತಿಪ್ಪಯ್ಯ,  ಮಲ್ಲಮ್ಮ,  ರೈತ ಸಂಘದ ಸಂಗನಕಲ್ಲು ಕೃಷ್ಣಪ್ಪ, ಶಿವಶಂಕರ್, ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಗುರುಸಿದ್ಧ ಮೂರ್ತಿ, ಜನವಾದಿ ಮಹಿಳಾ ಸಂಘದ ಚಂದ್ರಕುಮಾರಿ, ಯುವಜನ ಸಂಘದ ಕಟ್ಟೆಬಸಪ್ಪ, ಏರಿಸ್ವಾಮಿ, ನಿವೃತ್ತ ನೌಕರರ ಸಂಘದ ಮಂತಯ್ಯ,  ವೇದಿಕೆಯಲ್ಲಿದ್ದರು.