Home ಜಿಲ್ಲೆ ಮಂಗಳೂರು ಕಾರ್ಮಿಕ ಮುರುಗನ್ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರಕ್ಕೆ ಆಗ್ರಹ: ಸಿಐಟಿಯು – ಡಿವೈಎಫ್‌ಐ ನೇತೃತ್ವದಲ್ಲಿ...

ಕಾರ್ಮಿಕ ಮುರುಗನ್ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರಕ್ಕೆ ಆಗ್ರಹ: ಸಿಐಟಿಯು – ಡಿವೈಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ

ಮಂಗಳೂರು: ಮೀನುಗಾರಿಕಾ ಧಕ್ಕೆ ಪ್ರದೇಶದಲ್ಲಿ ದಾರಿದೀಪದ ಕಂಬವೊಂದು ಬಿದ್ದು ಪರಿಣಾಮವಾಗಿ ತಮಿಳುನಾಡು ಮೂಲದ ಕಾರ್ಮಿಕ ಮುರುಗನ್ ಸ್ಥಳದಲ್ಲೇ ಮೃತಪಟ್ಟಿದ್ದು ಈ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಾಗೂ ಈ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು, ಮೃತರಾದ ಮುರುಗನ್ ಕುಟುಂಬಕ್ಕೆ ರೂ.೨೫ ಲಕ್ಷದಷ್ಟು ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆ ಸಿಐಟಿಯು ಹಾಗೂ ಯುವಜನ ಸಂಘಟನೆ ಡಿವೈಎಫ್‌ಐ ಜಂಟಿ ನೇತೃತ್ವದಲ್ಲಿ ಶನಿವಾರ ದಕ್ಕೆ ಪ್ರದೇಶದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನ ದಲ್ಲಿ ಆಗ್ರಹಿಸಲಾಯಿತು.
೩೦೦ಕ್ಕೂ ಮಿಕ್ಕಿದ ಮೀನುಗಾರಿಕಾ ಕಾರ್ಮಿಕರು ಮೀನುಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿ ಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ದಿನವೊಂದಕ್ಕೆ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುವ ಮೀನುಗಾರಿಕಾ ದಕ್ಕೆ ಪ್ರದೇಶದಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲದಿರುವುದು ಮೀನುಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.ಸಾವಿರಾರು ಕಾರ್ಮಿಕರು ತಮ್ಮ ಹೊಟ್ಟೆಪಾಡಿ ಗಾಗಿ ಕಳೆದ ಹಲವಾರು ವರ್ಷಗಳಿಂದ ದುಡಿದು ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿದ್ದರೂ ಅವರ ಬದುಕಿನ ರಕ್ಷಣೆಗಾಗಿ,ಸಾಮಾಜಿಕ ಭದ್ರತೆಗಾಗಿ ಯಾವುದೇ ಸವಲತ್ತುಗಳ ಇಲ್ಲದೆ ಅತಂತ್ರರಾಗಿದ್ದಾರೆ.ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ,ಶೌಚಾಲಯ ವ್ಯವಸ್ಥೆ ಶುದ್ದ ಕುಡಿಯುವ ನೀರು ಸೇರಿದಂತೆ ಮೂಲ ಭೂತ ಸೌಕರ್ಯಗಳಿಲ್ಲ. ಘಟನೆ ನಡೆದು ವಾರ ಕಳೆದರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಆ ಮೂಲಕ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲ ಎಂಬಂತೆ ಮೀನುಗಾರಿಕಾ ಇಲಾಖೆ ಅಮಾನುಷವಾಗಿ ವರ್ತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ಮಿಯಾಝ್ ಅವರು ಮಾತನಾಡಿ, ತಮಿಳುನಾಡು ಮೂಲದ ಕಾರ್ಮಿಕರು ಮಂಗಳೂರಿಗಾಗಿ ದುಡಿಯುತ್ತಿದ್ದಾರೆ.ಮೃತಪಟ್ಟಿರುವ ಕಾರ್ಮಿಕ ತಮಿಳನೆಂದು ಜಿಲ್ಲಾಡಳಿತ ತೀರಾ ನಿರ್ಲಕ್ಷ್ಯ ವಹಿಸಿರುವುದು ಖೇದಕರ. ಧಕ್ಕೆಯಲ್ಲಿ ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷತಾ ಕ್ರಮಗಳಿಲ್ಲ.ಕಳೆದ ಹಲವು ವರ್ಷಗಳಿಂದ ಧಕ್ಕೆಯನ್ನು ಪ್ರವೇಶಿಸುವ ಎಲ್ಲಾ ವಾಹನಗಳಿಂದ ಲಕ್ಷಾಂತರ ರೂಪಾಯಿ ಸುಂಕ ಸಂಗ್ರಹಿಸಲಾ ಗುತ್ತಿದೆ. ಆದರೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗಿ ಜನರ ಸಮಯ ಟ್ರಾಫಿಕ್ ಜಾಮ್‌ನಲ್ಲಿ ವ್ಯರ್ಥವಾಗುತ್ತಿದೆ ಡ್ರೈನೇಜ್ ಅವ್ಯವಸ್ಥೆಯಿಂದಾಗಿ ಪ್ರದೇಶವಿಡೀ ದುರ್ನಾತ ಬೀರುತ್ತಿದೆ. ಮುರುಗನ್ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಧಕ್ಕೆ ನಿರ್ವಹಣೆಯನ್ನು ವಹಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು ಜಿಲ್ಲಾಡಳಿತವು ಮುರುಗನ್ ಕುಟುಂಬಕ್ಕೆ ಒಂದು ವಾರದ ಒಳಗಾಗಿ ೨೫ಲಕ್ಷ ಘೋಷಣೆ ಮಾಡಬೇಕು ಅದು ಅಸಾಧ್ಯವಾದರೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು ಹಾಗೂ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಸಂತೋಷ್ ಬಜಾಲ್ ರವರು ಮಾತನಾಡಿ,ಘಟನೆಯ ಗಂಭೀರತೆಯನ್ನು ಎಳೆಎಳೆಯಾಗಿ ವಿವರಿಸುತ್ತಾಸ್ಥಳೀಯ ಸಂಸದರು, ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ನಿರ್ಲಕ್ಷ್ಯತೆಯನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ,ನಾಗೇಶ್ ಕೊಟ್ಯಾನ್, ಡಿವೈಎಫ್‌ಐ ಜಿಲ್ಲಾ ನಾಯಕರಾದ ಮನೋಜ್ ವಾಮಂಜೂರು, ನವೀನ್ ಕೊಂಚಾಡಿ,ತಯ್ಯುಬ್ ಬೆಂಗರೆ, ರಿಝಾನ್ ಹರೇಕಳ, ಜಗದೀಶ್ ಕುಲಾಲ್,ಸಾಧಿಕ್ ಮುಲ್ಕಿ ಹನೀಫ್ ಬೆಂಗ್ರೆ, ಪಿ.ಜಿ ರಫೀಕ್, ಅಬ್ದುಲ್ ರಫೀಕ್ ಬೆಂಗ್ರೆ, ಬಿಲಾಲ್ ಬೆಂಗ್ರೆ, ಮುವಾಜ್ ಬೆಂಗ್ರೆ, ಅಶ್ರಫ್ ಹರೇಕಳ, ಜನವಾದಿ ಮಹಿಳಾ ಸಂಘಟನೆಯ ಪ್ರಮುಖರಾದ ಅಸುಂತ ಡಿಸೋಜಾ, ಯೋಗೀತಾ ಸುವರ್ಣ, ಹಸಿ ಮೀನು ಕಾರ್ಮಿಕರ ಸಂಘದ ಮುಖಂಡರಾದ ಆಸಿಫ್, ಇಟ್ಬಾಲ್, ಆಶ್ರಫ್, ರಫೀಕ್, ಅಝೀಝ್, ಶಫಿಕ್ ರೆಹಮಾನ್, ಸ್ಥಳೀಯ ಕಾರ್ಮಿಕ ಮುಖಂಡರಾದ ಮುಝಮ್ಮಿಲ್ ಕುಪ್ಪೆಟ್ಟು, ಮೂರ್ತಿ, ವೇಕಟೇಶ್ ಮುಂತಾದವರು ಉಪಸ್ಥಿತರಿದ್ದರು.